ಸೋಮವಾರಪೇಟೆ, ಫೆ. ೨೭: ಕೊಡಗಿನಲ್ಲೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಪೊಲೀಸ್ ಮಕ್ಕಳ ಘಟಕದ ಕಲ್ಯಾಣಾಧಿಕಾರಿ ಎಂ.ಬಿ. ಸುಮತಿ ಶೆಟ್ಟಿ ಹೇಳಿದರು.

ಪಟ್ಟಣದ ರೋಟರಿ ಕ್ಲಬ್ ವತಿಯಿಂದ ರೋಟರಿ ಭವನದಲ್ಲಿ ಆಯೋಜಿಸಿದ್ದ ಪೋಕ್ಸೊ ಕಾಯಿದೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಮೊಬೈಲ್ ಗೀಳು ಮತ್ತು ಸಾಮಾಜಿಕ ಜಾಲತಾಣಗಳ ದುರುಪಯೋಗದಿಂದ ಅಪ್ರಾಪ್ತ ಮಕ್ಕಳು ಕೆಟ್ಟ ಚಿತ್ರಗಳು ಮತ್ತು ಅಸಭ್ಯ ವಿಷಯಗಳಿಗೆ ಆಕರ್ಷಿತರಾಗಿ ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ ಎಂದು ವಿಷಾದಿಸಿದರು.

ಇಂದಿನ ಕಾಲದಲ್ಲಿ ಅಕ್ಷರಸ್ಥರೇ ಕೆಲವೊಮ್ಮೆ ಹೆಚ್ಚಿನ ತಪ್ಪುಗಳನ್ನು ಮಾಡುತ್ತಿರುವುದು ಬೇಸರದ ಸಂಗತಿ. ಪೋಷಕರು ಮಕ್ಕಳ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿರಬೇಕು. ಸ್ನೇಹ ವಲಯ, ಮೊಬೈಲ್ ಬಳಕೆ ಹಾಗೂ ಆನ್‌ಲೈನ್ ಚಟುವಟಿಕೆಗಳ ಬಗ್ಗೆ ಜಾಗೃತೆಯಿಂದ ಮಾರ್ಗದರ್ಶನ ನೀಡಬೇಕು ಎಂದರು.

ನಮ್ಮ ಸುತ್ತಮುತ್ತ ಪೋಕ್ಸೊ ಪ್ರಕರಣಗಳು ನಡೆದಾಗ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವುದು ಅನಿವಾರ್ಯ. ಮಕ್ಕಳ ಸುರಕ್ಷತೆ ಎಲ್ಲರ ಜವಾಬ್ದಾರಿ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷೆ ವೀಣಾ ಮನೋಹರ್, ಸಹಾಯಕ ಪ್ರಾಂತಪಾಲ ಉಲ್ಲಾಸ್ ಕೃಷ್ಣ, ಕ್ಲಬ್ ಕಾರ್ಯದರ್ಶಿ ಡಿ.ಪಿ. ರಮೇಶ್, ವಲಯ ಸೇನಾನಿ ಡಾ. ರಾಕೇಶ್ ಪಟೇಲ್, ಮುಂದಿನ ಸಾಲಿನ ವಲಯ ಸೇನಾನಿ ಎ.ಎಸ್.ಮಲ್ಲೇಶ್ ಇದ್ದರು. ಕಾರ್ಯಕ್ರಮದಲ್ಲಿ ಎಂ.ಬಿ. ಸುಮತಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.