ಕುಶಾಲನಗರ, ಫೆ. ೨೭: ಕುಶಾಲನಗರ ಸಮೀಪದ ಹಾರಂಗಿ ಆನೆ ಶಿಬಿರದಿಂದ ಕಳುವಾಗಿದ್ದ ಹೆಲ್ಮೆಟ್ ಕುಶಾಲನಗರ ಸರಕಾರಿ ಬಸ್ ನಿಲ್ದಾಣದಲ್ಲಿ ಪತ್ತೆಯಾದ ಪ್ರಕರಣ ನಡೆದಿದೆ.

ಚಲನಚಿತ್ರ ನಿರ್ದೇಶಕ ಬೆಂಗಳೂರಿನ ಪ್ರೀತಮ್ ಶೆಟ್ಟಿ ಎಂಬವರು ಕುಶಾಲನಗರಕ್ಕೆ ಭೇಟಿ ನೀಡಿ ತಮ್ಮ ಕುಟುಂಬ ಸದಸ್ಯರ ದ್ವಿಚಕ್ರ ವಾಹನ ಪಡೆದು ಹಾರಂಗಿ ಆನೆ ಶಿಬಿರಕ್ಕೆ ಬುಧವಾರ ಸಂಜೆ ತೆರಳಿದ್ದು ಅಲ್ಲಿನ ಸ್ವಾಗತ ಕೇಂದ್ರದ ಆವರಣದ ವಾಹನ ನಿಲುಗಡೆ ಕೇಂದ್ರದಲ್ಲಿ ಶುಲ್ಕ ಪಾವತಿಸಿ ದ್ವಿಚಕ್ರ ವಾಹನವನ್ನು ನಿಲುಗಡೆಗೊಳಿಸಿ ಅದರಲ್ಲಿ ಹೆಲ್ಮೆಟ್ ಬಿಟ್ಟು ಆನೆಗಳನ್ನು ವೀಕ್ಷಿಸಲು ತೆರಳಿದ್ದರು. ಹಿಂತಿರುಗಿ ಬರುವ ಸಂದರ್ಭ ಹೆಲ್ಮೆಟ್ ಕಾಣೆಯಾಗಿತ್ತು!!!

ಶಿಬಿರದ ಸ್ವಾಗತ ಕೇಂದ್ರದಲ್ಲಿ ವಿಚಾರಿಸಿದಾಗ ಪತ್ತೆ ಮಾಡಿ ನೀಡುವುದಾಗಿ ಭರವಸೆ ನೀಡಿದ ಸಿಬ್ಬಂದಿಗಳು ಸುಮಾರು ಒಂದು ಗಂಟೆ ಕಾಲ ವಿಚಾರಿಸಿ ಹುಡುಕಾಡಿದರೂ ಹೆಲ್ಮೆಟ್ ಮಾತ್ರ ಪತ್ತೆಯಾಗಿರಲಿಲ್ಲ.

ದ್ವಿಚಕ್ರ ವಾಹನ ಸ್ಥಳೀಯ ಪತ್ರಕರ್ತರೊಬ್ಬರಿಗೆ ಸೇರಿದ್ದು ಈ ಬಗ್ಗೆ ಕೇಂದ್ರದ ಅಧಿಕಾರಿ ಸಿಬ್ಬಂದಿಗಳಿಗೆ ಹೆಲ್ಮೆಟ್ ಕಳೆದುಕೊಂಡ ಬಗ್ಗೆ ದೂರು ನೀಡಲಾಗಿ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕೇಂದ್ರದ ಒಳಗೆ ತಾತ್ಕಾಲಿಕ ಕೆಲಸ ನಿರ್ವಹಿಸುತ್ತಿದ್ದ ಬಿಹಾರದ ಕಾರ್ಮಿಕನೊಬ್ಬ ಹೆಲ್ಮೆಟ್ ಕಳವು ಮಾಡಿರುವ ವಿಷಯ ಖಚಿತಗೊಂಡಿದೆ.

ಗುರುವಾರ ಬೆಳಿಗ್ಗೆ ಶಿಬಿರದ ಸಿಬ್ಬಂದಿಗಳು ಆತನನ್ನು ಸಂಪರ್ಕಿಸಿ ಹೆಲ್ಮೆಟ್ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿ ಮಾಲೀಕರಿಗೆ ತಲುಪಿಸಿದ್ದಾರೆ. ಬಿಹಾರದ ಯುವಕನೊಬ್ಬ ಕುಶಾಲನಗರ ಸರಕಾರಿ ನಿಲ್ದಾಣದಲ್ಲಿ ಗುತ್ತಿಗೆ ಆಧಾರದ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದು, ಆತ ಹೆಲ್ಮೆಟ್ ಕಳವು ಮಾಡಿರುವ ವಿಷಯ ಆನೆ ಶಿಬಿರದ ಕೇಂದ್ರದಲ್ಲಿರುವ ಸಿಸಿ ಕ್ಯಾಮೆರಾ ಮೂಲಕ ಬಹಿರಂಗಗೊAಡಿದ್ದು ಈ ಬಗ್ಗೆ ಕುಶಾಲನಗರ ಬಸ್ ನಿಲ್ದಾಣದ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಮೌಖಿಕ ದೂರು ನೀಡಲಾಗಿದೆ.

ಕುಶಾಲನಗರ ಪಟ್ಟಣದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ದ್ವಿಚಕ್ರ ವಾಹನ ಸವಾರರು ಬೈಕ್ ಮೇಲೆ ಇರಿಸಲಾಗುವ ಹೆಲ್ಮೆಟ್‌ಗಳನ್ನು ಕ್ಷಣಮಾತ್ರದಲ್ಲಿ ಕಳವು ಮಾಡುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಿದ್ದು, ಸವಾರರು ಈ ಬಗ್ಗೆ ಪೊಲೀಸರಿಗೆ ದೂರು ನೀಡದೇ ಇರುವ ಕಾರಣ ಇಂತಹ ಪ್ರಕರಣಗಳು ಅಧಿಕಗೊಳ್ಳಲು ಕಾರಣವಾಗಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

- ಸಿಂಚು