ಶನಿವಾರಸಂತೆ, ಫೆ. ೨೭: ಸರ್ವಧರ್ಮ ಸಹಿಷ್ಣುತೆಗೆ, ಸಹಬಾಳ್ವೆಗೆ ಮಾದರಿಯಾಗಿರುವ ಶನಿವಾರಸಂತೆ ಪಟ್ಟಣದಲ್ಲಿ ಮುಸ್ಲಿಂ ಸಮುದಾಯದವರು ಈ ವರ್ಷ ರಂಜಾನ್ ವ್ರತಾಚರಣೆಯೊಂದಿಗೆ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಸಮುದಾಯದ ಹಿರಿಯರು ತೀರ್ಮಾನ ಮಾಡಿ ಮಹಿಳೆಯರು ಮಸೀದಿಗೆ ಬಂದು ನಮಾಜ್ ಮಾಡುವ ಪ್ರತ್ಯೇಕ ಕೊಠಡಿಯ ಅವಕಾಶ ಕಲ್ಪಿಸಿಕೊಟ್ಟಿರುತ್ತಾರೆ.
ಪಟ್ಟಣದ ಜಾಮೀಯ ಮಸೀದಿಯಲ್ಲಿ ನಡೆಯುವ ರಂಜಾನ್ ಮಾಸಾಚರಣೆ ಸಂದರ್ಭ ಪ್ರಥಮ ಬಾರಿಗೆ ಹೆಣ್ಣುಮಕ್ಕಳು, ಮಹಿಳೆಯರು ಪ್ರಾರ್ಥನೆ, ನಮಾಜ್ ಮಾಡಲು ವಿಶೇಷ ಸ್ಥಳಾವಕಾಶ ಪ್ರತ್ಯೇಕವಾಗಿ ಕಲ್ಪಿಸಿಕೊಟ್ಟಿರುತ್ತಾರೆ. ರಂಜಾನ್ ಉಪವಾಸ ವ್ರತಾಚರಣೆ ಆರಂಭವಾಗಿ ಏಳು ದಿನಗಳಾಗಿದ್ದು, ಮುಸ್ಲಿಂ ಸಮುದಾಯದ ೩೦ ಮಹಿಳೆಯರು ಹೆಣ್ಣುಮಕ್ಕಳು ಸೇರಿದಂತೆ ಪ್ರತಿದಿನ ರಾತ್ರಿ ವೇಳೆ ಮಸೀದಿಗೆ ಹಾಜರಾಗುತ್ತಿದ್ದಾರೆ. ಧರ್ಮ ಗುರುಗಳ ಖುರಾನ್ ಪಠಣ ಕೇಳುತ್ತಾ ಶ್ರದ್ಧಾಭಕ್ತಿಯಿಂದ ನಮಾಜ್ ಹಾಗೂ ಪ್ರಾರ್ಥನೆ ಮಾಡುತ್ತಿದ್ದಾರೆ.
ಶನಿವಾರಸಂತೆಯಲ್ಲಿ ಹಿಂದೂ-ಮುಸ್ಲಿA ಸಮುದಾಯದವರು ಹಬ್ಬಹರಿದಿನಗಳಲ್ಲಿ, ದೇವಾಲಯ ವಾರ್ಷಿಕೋತ್ಸವದಲ್ಲಿ ಸಾಮರಸ್ಯ ಮೆರೆಯುತ್ತಾರೆ. ಗ್ರಾಮ ದೇವರಾದ ಶ್ರೀ ಬೀರಲಿಂಗೇಶ್ವರ-ಪ್ರಬಲ ಭೈರವಿ ಹಾಗೂ ಪರಿವಾರ ದೇವರ ವಾರ್ಷಿಕೋತ್ಸವ ಸಂದರ್ಭ ಮುಸ್ಲಿಂ ಸಮುದಾಯದವರು ಪಾಲ್ಗೊಳ್ಳುತ್ತಾರೆ. ದೇವಾಲಯಕ್ಕೆ ಬರುವುದರ ಜತೆಗೆ ಜಾಮೀಯ ಮಸೀದಿಯಲ್ಲಿ ದೇವಾಲಯ ಸಮಿತಿಯವರು ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಬರುವಾಗ ಸ್ವಾಗತಿಸಿ, ಧಾರ್ಮಿಕ ಸಭೆ ನಡೆಸಿ ಅರ್ಚಕರಾದಿಯಾಗಿ ದೇವಾಲಯ ಸಮಿತಿ ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸುತ್ತಾರೆ.
ಇದೀಗ ಜಾಮೀಯ ಮಸೀದಿಯಲ್ಲಿ ನಮಾಜ್ ಮಾಡಲು, ಪ್ರಾರ್ಥನೆ ಸಲ್ಲಿಸಲು ಮಹಿಳೆಯರಿಗೆ ಪ್ರತ್ಯೇಕವಾಗಿ ಸ್ಥಳಾವಕಾಶ ಕಲ್ಪಿಸಿರುವುದನ್ನು ಹಿಂದೂ ಸಮುದಾಯದವರು ಸ್ವಾಗತಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ.