ಮಡಿಕೇರಿ ಫೆ. ೨೭: ಹೊದ್ದೂರು ಗ್ರಾಮದ ಶ್ರೀ ಶಾಸ್ತ - ಈಶ್ವರ ದೇವರ ೫ನೇ ವರ್ಷದ ವಾರ್ಷಿಕ ಉತ್ಸವ ಸಹಸ್ರಾರು ಭಕ್ತರ ನಡುವೆ ಶ್ರದ್ಧಾಭಕ್ತಿಯಿಂದ ಜರುಗಿ ಸಂಪನ್ನಗೊAಡಿತು.
ತಾ. ೧೬ ರಂದು ರಾತ್ರಿ ೭ ಗಂಟೆಗೆ ಅಂದಿ ಬೊಳಕ್, ಪ್ರಾರ್ಥನೆ ನಡೆಯಿತು. ತಾ. ೧೭ ರಂದು ಬೆಳಿಗ್ಗೆ ೭ ಗಂಟೆಗೆ ಗಣಪತಿ ಹೋಮ, ೧೦ ಗಂಟೆಗೆ ಪ್ರತಿಷ್ಠಾ ವಾರ್ಷಿಕ ಅಲಂಕಾರ ಪೂಜೆ, ೧೧ ಗಂಟೆಗೆ ಶ್ರೀ ಬೇಟೆ ಅಯ್ಯಪ್ಪ ಸನ್ನಿಧಿ ಅಭಿಷೇಕ ಪೂಜೆ ಹಾಗೂ ಶ್ರೀ ವಿಷ್ಣುಮೂರ್ತಿ ದೈವದ ಸನ್ನಿಧಿ ಅಭಿಷೇಕ ಪೂಜೆ ನಡೆಸಲಾಯಿತು. ಸಂಜೆ ೪ ಗಂಟೆಗೆ ಶ್ರೀ ಶಾಸ್ತ - ಈಶ್ವರ ದೇವರ ಜಳಕ, ಕಾವೇರಿ ಹೊಳೆಯಲ್ಲಿ ಜಳಕದ ನಂತರ ಚಂಡೆ ಮದ್ದಳೆಯೊಂದಿಗೆ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಬಳಿಕ ದೇವಸ್ಥಾನದ ಮುಂಭಾಗ ಸಾಂಪ್ರದಾಯಿಕ ಉಡುಪಿನೊಂದಿಗೆ ಮಹಿಳೆಯರು ತಳೆಯತ್ತಕ್ಕಿ ಬೊಳಕ್ ಹಾಗೂ ಕಲಶದೊಂದಿಗೆ ಸ್ವಾಗತಿಸಲಾಯಿತು.
ದೇವಸ್ಥಾನದ ಸುತ್ತ ನಡೆದ ತಡಂಬ್ ನೃತ್ಯ ನೆರೆದಿದ್ದವರನ್ನು ಭಕ್ತಪರವಷರನ್ನಾಗಿಸಿತು. ರಾತ್ರಿ ೧೦ ಗಂಟೆಗೆ ವಿಷ್ಣುಮೂರ್ತಿ ದೈವದ ತೊಯತ ತೆರೆ ಹಾಗೂ ಮೇಲೇರಿಗೆ ಅಗ್ನಿಸ್ಪರ್ಶ ನಡೆಯಿತು. ತಾ. ೧೮ ರಂದು ಬೆಳಿಗ್ಗೆ ೯ ಗಂಟೆಗೆ ಶ್ರೀ ವಿಷ್ಣುಮೂರ್ತಿ ದೈವದ ಕೋಲ ಜರುಗಿ ಬಾರಣಿಯೊಂದಿಗೆ ಸಂಪನ್ನಗೊAಡಿತು. ಹಬ್ಬದ ದಿನದ ಎಲ್ಲಾ ಸಮಯದಲ್ಲೂ ದೇವಸ್ಥಾನ ಸಮಿತಿ ವತಿಯಿಂದ ಅನ್ನಸಂತರ್ಪಣೆ ನಡೆಸಲಾಯಿತು. ದೇವಸ್ಥಾನದ ಅರ್ಚಕ ಜಯರಾಜ್ ಭಟ್ ತಂತ್ರಿಯವರ ಮುಂದಾಳತ್ವದಲ್ಲಿ ಪೂಜಾ ವಿಧಿ ವಿಧಾನಗಳನ್ನು ನಡೆಸಲಾಯಿತು. ನಾಡಿನ ಹಾಗೂ ಹೊರನಾಡಿನ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ತೀರ್ಥ ಪ್ರಸಾದ ಸ್ವೀಕರಿಸಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ಕೂಡಂಡ ರಾಜೇಂದ್ರ ಅಯ್ಯಮ್ಮ ಹಾಗೂ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.