ಇದು ಕರ್ನಾಟಕದಲ್ಲಿ ಆಚರಣೆಯಲ್ಲಿರುವ ಒಂದು ಜನಪದ ಹಬ್ಬ. ಉತ್ತರ ಕರ್ನಾಟಕದಲ್ಲಿ ಈ ಹಬ್ಬವನ್ನು ಹೋಳಿ ಹುಣ್ಣಿಮೆ, ಹೋಳಿ ಹಬ್ಬ ಎಂದು ಆಚರಿಸುತ್ತಾರೆ.

ಜಾನಪದ ಪರಂಪರೆಯ ಸಾಮಾಜಿಕ ಸಂಪ್ರದಾಯಗಳ ಸಂಕೇತಗಳನ್ನು ಈ ಹಬ್ಬದ ನಡಾವಳಿಯಲ್ಲಿ ಗುರುತಿಸಬಹುದು. ಹಳೆಯ ವಸ್ತುಗಳನ್ನು ಹೋಳಿಗಾಗಿ ಸಂಗ್ರಹಿಸುವುದು, ಕುಳ್ಳು (ಬೆರಣಿ), ಕಟ್ಟಿಗೆ ಕಳುವು ಮಾಡಿ ತರುವುದು, ಕಾಮದಹನದ ಬೇರೆ, ಬೇರೆ ಕಾರ್ಯಕ್ಕಾಗಿ ಹಳ್ಳಿಗಳಲ್ಲಿ ಬೇರೆ, ಬೇರೆ ಹಕ್ಕುದಾರರಿರುವುದು, ಇವರೆಲ್ಲರ ಮೇಲೆ ಹೋಳಿಯ ನಾಯಕ ಎಂಬ ಹಿರಿಯನಿರುವುದು ಇತ್ಯಾದಿಗಳು ಜನಪದ ಸಂಪ್ರದಾಯಗಳು.

ಈ ಹಬ್ಬ ಕುರಿತಂತೆ ಉತ್ತರ ಕರ್ನಾಟಕದಲ್ಲಿ ಜಾನಪದ ಲಾವಣಿಗಳು, ದುಂದುಮೆ ಹಾಡು, ಹಿಯಾಲು ಮುಂತಾದ ಜನಪದ ಸಾಹಿತ್ಯ ಕಂಡುಬರುವುದು.

ಕಾಮನ ಹಬ್ಬಕ್ಕೆ ಪೌರಾಣಿಕ ಅಂಶಗಳೂ ಸೇರಿಕೊಂಡಿವೆ. ವಿಷ್ಣು ಪುರಾಣ, ಲಿಂಗ ಪುರಾಣಗಳ ಪ್ರಕಾರ ಪರಮೇಶ್ವರನ ಉಗ್ರ ತಪಸ್ಸಿಗೆ ಭಂಗ ತಂದ ಮನ್ಮಥ ಮುಕ್ಕಣ್ಣನ ಉರಿಗಣ್ಣಿನ ಬಿರುಬಿಗೆ ಸಿಕ್ಕು ಬೆಂದು ಹೋದ. ಅನಂತರ ರತಿಯ ಮೇಲಿನ ಕನಿಕರದಿಂದ ಕಾಮ ಅನಂಗನಾಗಿ ಬಾಳುವಂತೆ ಪರಮೇಶ್ವರ ಆನುಗ್ರಹಿಸಿದ. ಈ ಕಲ್ಪನೆಯಂತೆ ರತಿ-ಮನ್ಮಥರನ್ನು ಮೊದಲು ಪೂಜಿಸಿ, ಹಾಡಿ ಕುಣಿದು ಆನಂತರ ಕಾಮನನ್ನು ಸುಡುವ ಸಂಪ್ರದಾಯ ಸಹ ಕರ್ನಾಟಕದಲ್ಲಿದೆ.

ಇದು ವಸಂತಾಗಮನವನ್ನು ಸಂತೋಷ, ಸಂಭ್ರಮಗಳಿAದ ಸ್ವಾಗತಿಸುವ ಹಬ್ಬವಾದ್ದರಿಂದ ವಸಂತೋತ್ಸವವೂ ಹೌದು.

ಉತ್ತರ ಭಾರತದ ಪ್ರತಿಯೊಂದು ಪಟ್ಟಣ ಮತ್ತು ಹಳ್ಳಿಯಲ್ಲಿ ಈ ಹಬ್ಬವನ್ನು ಹೋಳಿ ಎಂದು ಆಚರಿಸುತ್ತಾರೆ.

ಹೋಳಿ ಬಣ್ಣಗಳ ಹಬ್ಬ. ಪ್ರಕೃತಿ ಚೇತನಶಾಲಿ ಯಾಗುತ್ತಾ ಹೋದಂತೆ ಮಾನವನ ಉತ್ಸಾಹವು ಚಿಮ್ಮುತ್ತದೆ. ಬಣ್ಣಗಳನ್ನು ಎರಚಾಡುತ್ತಾ, ಅಬಾಲವೃದ್ಧರೂ ನಲಿದಾಡುವ ಹಬ್ಬವು ಇದಾಗಿದೆ.

ಈ ದಿನ ಪ್ರಹ್ಲಾದನು ತನ್ನನ್ನು ಕೊಲ್ಲಲು ಬಂದ ಹೋಳಿಕಾ ಎಂಬ ರಾಕ್ಷಸಿಯಿಂದ ಪಾರಾದ ದಿನ. ಕೃಷ್ಣನು ಪೂತನಿಯನ್ನು ಕೊಂದ ದಿನ. ಶಿವನು ಕಾಮನನ್ನು ಸುಟ್ಟ ದಿನ ಎಂದೂ ಉಲ್ಲೇಖಿಸಲಾಗಿವೆ. ಕಾಮ ಸುಟ್ಟು ಪ್ರೇಮ ಹುಟ್ಟಬೇಕಾದ ಅಗತ್ಯವನ್ನು ಈ ಎಲ್ಲಾ ಕಥೆಗಳು ಸಾರುತ್ತವೆ. ಹೋಳಿ ಹಬ್ಬವು ಉತ್ತರ ಭಾರತದಲ್ಲಿ ಮಹಾ ಹಬ್ಬವಾಗಿ ಆಚರಿಸಲ್ಪಡುವುದು. ಈ ಹಬ್ಬವನ್ನು ಅಂದು ಬಣ್ಣವನ್ನು ಪರಸ್ಪರ ಎರಚಿ ಸಂಭ್ರಮಿಸುತ್ತಾರೆ. ಹೋಳಿ ಹಬ್ಬದಂದು ನಾವು ಸಂಪ್ರದಾಯದ ಸಂಕೋಲೆಗಳಿAದ ಹೊರ ಬರುತ್ತೇವೆ. ನಿಶ್ಚಿಂತೆಯಿAದ ಇರುತ್ತೇವೆ. ನಮ್ಮ ಕಷ್ಟಕಾರ್ಪಣ್ಯ ಗಳನ್ನು ಮರೆತು ಹಾಯಾಗಿ ಕಾಲಕಳೆಯುತ್ತೇವೆ. ಈ ಹಬ್ಬ ಸರ್ವರಿಗೂ ಶುಭವನ್ನುಂಟು ಮಾಡಲಿ.

- ಹರೀಶ್ ಸರಳಾಯ, ಮಡಿಕೇರಿ. ಮೊ. ೯೭೩೧೮೧೦೨೫೬.