ಪೊನ್ನAಪೇಟೆ, ಮಾ. ೫: ಪೊನ್ನಂಪೇಟೆ ಕುಶಾಲಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಶ್ರೀ ನಂದೀಶ್ವರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಆಟೋ ಚಾಲಕರ ಸಂಘದ ನಡುವಿನ ಎರಡನೇ ವರ್ಷದ ಕ್ರಿಕೆಟ್ ಪಂದ್ಯಾವಳಿಯ ಚಾಂಪಿಯನ್ ಆಗಿ ಬಾಳೆಲೆಯ ಮಾರಮ್ಮ ಯೂತ್ ಕ್ಲಬ್ ತಂಡ ಹೊರಹೊಮ್ಮಿತು.
ವೀರಾಜಪೇಟೆಯ ಸನಾ ಫ್ರೆಂಡ್ಸ್ ತಂಡ ರನ್ನರ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಮಾರಮ್ಮ ಯೂತ್ ಕ್ಲಬ್ ನಿಗದಿತ ೪ ಒವರ್ಗಳಲ್ಲಿ ಸನಾ ಫ್ರೆಂಡ್ಸ್ ತಂಡವನ್ನು ಕೇವಲ ೨೦ ರನ್ಗಳಿಗೆ ಕಟ್ಟಿಹಾಕಿತು. ನಂತರ ಬ್ಯಾಟ್ ಮಾಡಿದ ಮಾರಮ್ಮ ತಂಡ ಯಾವುದೇ ವಿಕೆಟ್ ಕಳೆದುಕೊಳ್ಳದೆ ಎರಡು ಓವರ್ಗಳಲ್ಲಿ ಗೆಲುವಿನ ನಗೆ ಬೀರಿತು.
ಫಿಯರ್ ಲೆಸ್ ಫೈಟರ್ಸ್ ತಂಡ ಮೂರನೇ ಸ್ಥಾನ, ವೀರಾಜಪೇಟೆ ಆಧ್ಯ ಕ್ರಿಕೆಟರ್ಸ್ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿತು.
ಚಾಂಪಿಯನ್ ತಂಡ ರೂ.೨೦,೨೨೨ ನಗದು ಮತ್ತು ಟ್ರೋಫಿ, ರನ್ನರ್ಸ್ ತಂಡ ರೂ.೧೦,೧೧೧ ಮತ್ತು ಟ್ರೋಫಿ, ಮೂರನೇ ಸ್ಥಾನ ಪಡೆದ ತಂಡ ರೂ. ೩೦೦೦ ನಗದು ಮತ್ತು ಟ್ರೋಫಿ ಹಾಗೂ ನಾಲ್ಕನೇ ಬಹುಮಾನ ಪಡೆದ ತಂಡ ಟ್ರೋಫಿ ಪಡೆದುಕೊಂಡಿತು.
ವೈಯಕ್ತಿಕ ಪ್ರಶಸ್ತಿ
ಬೆಸ್ಟ್ ಫೀಲ್ಡರ್ ಆಗಿ ಪ್ರಶಾಂತ್, ಅಧಿಕ ಸಿಕ್ಸರ್ ಸುಜಿತ್, ಬೆಸ್ಟ್ ಬೌಲರ್ ಆಗಿ ಶಿಜು, ಬೆಸ್ಟ್ ಬ್ಯಾಟ್ಸ್ಮನ್ ಆಗಿ ಸುಜಿತ್, ಮ್ಯಾನ್ ಆಫ್ ದ ಸೀರಿಸ್ ಆಗಿ ಭರತ್ ಗೌಡ ಪ್ರಶಸ್ತಿ ಪಡೆದುಕೊಂಡರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಟ್ರಪಂಡ ಶ್ರೀಮಂತ್ ಮುತ್ತಣ್ಣ, ಪೊನ್ನಂಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೀರಂಡ ಕಂದ ಸುಬ್ಬಯ್ಯ, ಬಾಳೆಲೆ ಮಾರಮ್ಮ ಯೂತ್ ಕ್ಲಬ್ ಅಧ್ಯಕ್ಷ ಪ್ರವೀಣ್, ಸದಸ್ಯ ಪ್ರಶಾಂತ್, ಪೊನ್ನಂಪೇಟೆ ಉಪಠಾಣಾಧಿಕಾರಿ ಕೃಷ್ಣ, ಹ್ಯಾರಿ ಜೋಡುಬೀಟಿ, ಶ್ರೀ ನಂದೀಶ್ವರ ಸಂಘದ ಉಪಾಧ್ಯಕ್ಷ ಚಮ್ಮಟ್ಟಿರ ಶಾಂತ ಪೊನ್ನಪ್ಪ, ಕಾರ್ಯದರ್ಶಿ ಸುರೇಶ್, ಸದಸ್ಯ ಪ್ರಶಾಂತ್ ವಿಜೇತರಿಗೆ ಬಹುಮಾನ ವಿತರಿಸಿದರು. ಈ ಸಂದರ್ಭ ಕ್ರೀಡಾ ಸಂಚಾಲಕ ಪೆಮ್ಮಂಡ ಉಮೇಶ್, ಆಯೋಜಕರಾದ ಗಣೇಶ್, ಗುಣ, ಪ್ರಶಾಂತ್, ಪ್ರದೀಪ್, ಜೀವನ್, ಗಣಪತಿ, ವಿನೋದ್, ದೊರೆ, ಗಣೇಶ್ ಟಿ.ಎಸ್, ಸುನೀಲ್, ಸಂಘದ ಸದಸ್ಯರು ಹಾಗೂ ಕ್ರೀಡಾಭಿಮಾನಿಗಳು ಹಾಜರಿದ್ದರು