ಮಡಿಕೇರಿ ಮಾ.೮ : ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ, ವೀರಾಜಪೇಟೆ ತಾಲೂಕು, ಅಮ್ಮತ್ತಿ ಹೋಬಳಿ ಘಟಕ ಮತ್ತು ಸಿದ್ದಾಪುರ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ವೀರಾಜಪೇಟೆಯ ಮೊಣ್ಣಂಡ ಕೆ.ಚೆಂಗಪ್ಪ ಹಾಗೂ ಮರಗೋಡುವಿನ ಚೆರಿಯಮನೆ ಕೃಷ್ಣಪ್ಪ ಅವರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಸಿದ್ದಾಪುರ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಹಾಗೂ ಕೊಡವ ಭಾಷಾ ಬೆಳವಣಿಗೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಸಾಹಿತಿ ಸೋಮಯಂಡ ಕೌಶಲ್ಯ ಸತೀಶ್, ಕೊಡವ ಮತ್ತು ಕನ್ನಡ ಎರಡೂ ಭಾಷೆಗಳಿಗೆ ದ್ರಾವಿಡ ಮೂಲವಾಗಿದೆ. ಭಾಷೆ ಹುಟ್ಟಿ ಬಂದ ವಿವರ, ಜನಾಂಗಗಳ ಬೆಳವಣಿಗೆ ಮತ್ತು ಕೊಡವ ಭಾಷೆಯ ಉಲ್ಲೇಖ ಕನ್ನಡದ ಆದಿ ಕೃತಿಗಳಲ್ಲಿವೆ. ಸರಕಾರ ಕೊಡವ ಮತ್ತು ಕನ್ನಡ ಭಾಷೆಗಳ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.

ದೇವಣಗೇರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಲೋಕೇಶ ಹೆಚ್.ಡಿ ಅವರು ಜಾನಪದ ಸಾಹಿತ್ಯದ ಬಗ್ಗೆ ಉಪನ್ಯಾಸ ನೀಡಿ ಜಾನಪದ ಕಥೆಗಳ ಮೌಲ್ಯಗಳು, ಒಗಟು ಹಾಗೂ ಗಾದೆಗಳ ಮಹತ್ವವನ್ನು ವಿವರಿಸಿದರು.

ಜನಪದ ಕೇವಲ ಪದವಲ್ಲ ಜಾಣರ ಪದ, ಜನಪದ ಸಾಹಿತ್ಯವು ಕನ್ನಡ ಸಾಹಿತ್ಯದ ಆತ್ಮವಿದ್ದಂತೆ, ಅಲ್ಲದೆ ಜಾಣ್ಮೆಯ ಸಾಹಿತ್ಯವಾಗಿಯೂ ಗಮನ ಸೆಳೆದಿದೆ ಎಂದು ತಿಳಿಸಿದ ಅವರು ಜನಪದ ಕಾವ್ಯ ಹಾಗೂ ಜಾನಪದ ಗೀತೆಗಳ ಬಗ್ಗೆ ವಿವರ ನೀಡಿದರು.

ಪ್ರಮುಖರಾದ ಟೋಮಿ ಥೋಮಸ್ ಕನ್ನಡ ಭಾಷೆಯ ಇಂದಿನ ಪರಿಸ್ಥಿತಿಯ ಕುರಿತು ಮಾತನಾಡಿದರು. ವೀರಾಜಪೇಟೆ ಕ.ಸಾ.ಪ ಅಧ್ಯಕ್ಷ ಡಿ.ರಾಜೇಶ ಪದ್ಮನಾಭ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಅಮ್ಮತ್ತಿ ಹೋಬಳಿಯ ಅಧ್ಯಕ್ಷ ಟಿ.ಹೆಚ್. ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಿದ್ದಾಪುರ ಪ್ರೌಢಶಾಲೆಯ ಕಾರ್ಯದರ್ಶಿ ಪಿ.ಸಿ. ಅಚ್ಚಯ್ಯ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಡಿ.ಬಾಬು ನಾಯಕ್, ಗುಹ್ಯ ಅಗಸ್ತೆö್ಯÃಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಎಸ್.ಬಿ.ಪ್ರತೀಶ್, ಕಸಾಪ ಗೌರವ ಕೋಶಾಧಿಕಾರಿ ಶಬರೀಶ್ ಶೆಟ್ಟಿ, ಕಲಾವಿದÀ ಬಾವ ಮಾಲ್ದಾರೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಶಿಕ್ಷಕರಾದ ಲವ ಪಿ.ಆರ್ ಸ್ವಾಗತಿಸಿ, ವಿಠ್ಠಲ ಮಗದುಮ್ಮ ನಿರೂಪಿಸಿದರು.