ಸೋಮವಾರಪೇಟೆ, ಮಾ. ೮: ಇಲ್ಲಿನ ರಾಮನವಮಿ ಉತ್ಸವ ಸಮಿತಿ ವತಿಯಿಂದ ರಾಮನವಮಿ ಆಚರಣೆ ನಿಮಿತ್ತವಾಗಿ ತಾ ೨೭ನೇ ರಂದು ಪಟ್ಟಣದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಸುಭಾಶ್ ತಿಮ್ಮಯ್ಯ ತಿಳಿಸಿದ್ದಾರೆ. ಪಟ್ಟಣದ ಪತ್ರಿಕಾಭವನದಲ್ಲಿ ರಾಮನವಮಿ ಅಂಗವಾಗಿ ಕರೆಯಲಾಗಿದ್ದ ಪೂರ್ವ ತಯಾರಿ ಸಭೆಯ ಅಧ್ಯಕತೆ ವಹಿಸಿ ಅವರು ಮಾತನಾಡಿದರು. ವರ್ಷಂಪ್ರತಿ ನಡೆಯುವ ಶ್ರೀ ರಾಮನವಮಿ ಯಂದು ಶ್ರೀ ರಾಮನ ಮೂರ್ತಿಯನ್ನು ವಿದ್ಯುತ್ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಶೋಭಾಯಾತ್ರೆ ನಡೆಯಲಿದೆ. ವೀರಗಾಸೆ, ಹುಲಿವೇಷ, ಭಜನೆ ಕುಣಿತ, ಕೀಲು ಕುದುರೆ, ತಮಟೆ, ನಾಸಿಕ್ ಬ್ಯಾಂಡ್, ವಾಲಗ, ಕಂಸಾಳೆ, ಡೊಳ್ಳು ಕುಣಿತ, ಜಾನಪದ ಕಲಾ ತಂಡಗಳ ನೃತ್ಯ ಪ್ರದರ್ಶನ ನಡೆಯಲಿದೆ. ಆಕರ್ಷಕ ಸಿಡಿಮದ್ದಿನ ಪ್ರದರ್ಶನವೂ ಇರಲಿದೆ ಎಂದರು. ರಾಮನವಮಿ ಉತ್ಸವ ಸಮಿತಿ ವತಿಯಿಂದ ಜ್ಞಾನವಿಕಾಸ ಶಾಲಾ ಆವರಣದಲ್ಲಿ ಸಾರ್ವಜನಿಕರಿಗೆ ಹಾಗೂ ಭಕ್ತಾದಿಗಳಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಎ.ಹೆಚ್. ತಿಮ್ಮಯ್ಯ, ಉಪಾಧ್ಯಕ್ಷ ಎಂ.ಬಿ. ಉಮೇಶ್, ಖಜಾಂಚಿ ಸಿ.ಸಿ. ನಂದ ಉಪಸ್ಥಿತರಿದ್ದರು.