ಹೆಬ್ಬಾಲೆ, ಮಾ. ೮: ಇಲ್ಲಿನ ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹೆಬ್ಬಾಲೆ ಹೋಬಳಿ ಘಟಕದ ಸಂಯುಕ್ತ ಆಶ್ರಯದಲ್ಲಿ ದಿ. ಶಾಂತ ಮಲ್ಲಸ್ವಾಮಿ ದತ್ತಿ ಹಾಗೂ ದಿ. ಪುಟ್ಟಮ್ಮ ಮತ್ತು ದಿ. ಹೆಬ್ಬಾಲೆ ನಂಜಾಚಾರ್ ದತ್ತಿಯಡಿ ಕೊಡಗಿನ ವೀರಶೈವ ಅರಸರ ಅಳ್ವಿಕೆ ಹಾಗೂ ಸಮಾಜಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ ಕುರಿತ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಹೆಬ್ಬಾಲೆ ಪ್ರೌಢಶಾಲಾ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಪುಸ್ತಕ ಹಾಗೂ ದಿನಪತ್ರಿಕೆಗಳನ್ನು ಓದುವ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾಹಿತಿ ಭಾರದ್ವಾಜ್ ಕೆ.ಆನಂದತೀರ್ಥ ಮಾತನಾಡಿ, ವಿದ್ಯಾರ್ಥಿಗಳು ಆಳವಾದ ಅಧ್ಯಯನ ಮಾಡುವ ಮೂಲಕ ಇತಿಹಾಸದ ಅರಿವು ಹೊಂದಬೇಕು. ಇತಿಹಾಸವನ್ನು ಸರಿಯಾಗಿ ಅರ್ಥೈಸಿಕೊಂಡಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿರ್ದೇಶಕ ಮೆ.ನಾ. ವೆಂಕಟನಾಯ್ಕ ಅವರು ಕೊಡಗಿನ ವೀರಶೈವ ಅರಸರ ಅಳ್ವಿಕೆ ಕುರಿತು ಉಪನ್ಯಾಸ ಕುರಿತು ಮಾತನಾಡಿ, ಕೊಡಗಿನಲ್ಲಿ ೧೬ನೇ ಶತಮಾನದಿಂದ ೧೮೩೪ರವರೆಗೆ ಹಾಲೇರಿ ರಾಜವಂಶದ ಲಿಂಗಾಯತ ರಾಜರು ಆಡಳಿತ ನಡೆಸಿದರು. ಇಕ್ಕೇರಿ ನಾಯಕರ ಸಂಬAಧಿಗಳಾದ ಇವರು, ಬಲವಾದ ಆಡಳಿತ ಸ್ಥಾಪಿಸಿದರು. ಮುದ್ದುರಾಜ, ಲಿಂಗರಾಜ ಮತ್ತು ವೀರರಾಜೇಂದ್ರ ಪ್ರಮುಖ ರಾಜರು. ಇವರ ಕಾಲದಲ್ಲಿ ಕೃಷಿ, ಮಡಿಕೇರಿ ಕೋಟೆ ಸೇರಿದಂತೆ ಕೊಡಗಿನ ಪ್ರಗತಿ ಕಂಡಿತು. ಲಿಂಗಾಯತ ರಾಜರ ಅವಧಿಯಲ್ಲಿ ಕೊಡಗು ಸಾಂಸ್ಕೃತಿಕವಾಗಿ ಮತ್ತು ಆಡಳಿತಾತ್ಮಕವಾಗಿ ಪ್ರಬಲವಾಗಿ ಬೆಳೆಯಿತು. ೧೮೩೪ರಲ್ಲಿ ಚಿಕ್ಕವೀರರಾಜೇಂದ್ರ ಬ್ರಿಟಿಷರೊಂದಿಗೆ ಸಂಘರ್ಷದ ನಂತರ ಪದಚ್ಯುತಿಗೊಂಡು, ಕೊಡಗು ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟಿತು ಎಂದರು.
ಕುಶಾಲನಗರ ಅನುಗ್ರಹ ಪದವಿ ಪೂರ್ವ ಮತ್ತು ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಎಚ್.ಬಿ.ಲಿಂಗಮೂರ್ತಿ ಅವರು ಸಮಾಜಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ ಕುರಿತು ಮಾತನಾಡಿ, ವಿಶ್ವಕರ್ಮ ಸಮಾಜದ ಪ್ರತಿಯೊಬ್ಬರೂ ತಮ್ಮ ಮೂಲ ಕಸಬು ಶಿಲ್ಪಕಲೆಯನ್ನು ಕಲಿಸುವುದರ ಜೊತೆಗೆ ಮೂರ್ತಿಶಿಲ್ಪ ಕೆತ್ತನೆ ಮುಂತಾದ ಕೌಶಲ್ಯಭರಿತ ಕಾರ್ಯದಿಂದ ಸಮುದಾಯಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದರು.
ದಿವ್ಯಸಾನಿದ್ಯ ವಹಿಸಿದ್ದ ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಆದರ್ಶಯುತ ಸಂದೇಶವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ೧೨ನೇ ಶತಮಾನದಲ್ಲಿ ಶಿವಶರಣರು ಈ ಜಗತ್ತಿಗೆ ಮಾನವಕುಲಕ್ಕೆ ಸಪ್ತಸೂತ್ರಗಳನ್ನು ನೀಡಿದ್ದಾರೆ, ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ ಎಂದು ಸೂತ್ರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಬದುಕು ಕಂಡುಕೊಳ್ಳಬೇಕು ಎಂದರು. ಕನ್ನಡ ಸಾಹಿತ್ಯ ಪರಿಷತ್ತು ಹೆಬ್ಬಾಲೆ ಹೋಬಳಿ ಘಟಕದ ಅಧ್ಯಕ್ಷ ಎಂ.ಎನ್. ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಹೆಬ್ಬಾಲೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಚ್.ವಿ.ಶಿವಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ನಾಗೇಶ್, ಕಾರ್ಯದರ್ಶಿ ಕೆ.ವಿ. ಉಮೇಶ್, ತೊರೆನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಬಿ. ಜಗದೀಶ್, ನಿರ್ದೇಶಕ ಕೆ.ಎಸ್.ಕೃಷ್ಣೇಗೌಡ, ಕನ್ನಡ ಸಾಹಿತ್ಯ ಪರಿಷತ್ತು ಹೆಬ್ಬಾಲೆ ಘಟಕದ ಕಾರ್ಯದರ್ಶಿ ಹೆಚ್.ಎನ್. ಸುಬ್ರಮಣ್ಯ, ನಿಕಟಪೂರ್ವ ಅಧ್ಯಕ್ಷ ಟಿ.ಕೆ. ಪಾಂಡುರAಗ, ಡಿಸಿಸಿ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ರಾಮಶೆಟ್ಟರು, ಪ್ರಮುಖರಾದ ಎಚ್.ಬಿ.ಕಾಂತಮಣಿ, ರೇಣುಕಾ, ಶ್ರೀನಿವಾಸ್, ಸೋಮಶೇಖರ್, ಕಾಳಪ್ಪ, ಅಪ್ಪಣ್ಣ, ಸದಾನಂದ ಶಕುಂತಲಾ ಮತ್ತಿತರರು ಪಾಲ್ಗೊಂಡಿದ್ದರು. ..