ಐಗೂರು, ಮಾ.೯: ಕುಶಾಲನಗರ ಬಸ್ ನಿಲ್ದಾಣ ದಲ್ಲಿ ಭಾನುವಾರ ವಿಚಿತ್ರ ಘಟನೆಯೊಂದು ಪ್ರಯಾಣಿಕರ ಗಮನ ಸೆಳೆಯಿತು . ಬಸ್ ಗಾಗಿ ಕಾಯುತ್ತಿದ್ದ ಪ್ರಯಾಣಿಕರು ತೀವ್ರ ಬಿಸಿಲಿನ ತಾಪದಿಂದ ದಣಿವಾರಿಸಿಕೊಳ್ಳಲು ಕೈಯಲ್ಲಿ ನೀರಿನ ಬಾಟಲಿಗಳನ್ನು ಹಿಡಿದು ನಿಂತಿದ್ದರು. ಈ ವೇಳೆ ಎಲ್ಲಿಂದಲೋ ಬಂದ ಮಂಗವೊAದು ನೀರಿನ ಬಾಟಲಿಗಳನ್ನು ಹಿಡಿದುಕೊಂಡಿದ್ದ ಪ್ರಯಾಣಿಕರ ಹೆಗಲೇರಿ ನೀರಿಗಾಗಿ ಬೇಡಿಕೊಳ್ಳುವಂತೆ ಕಾಣಿಸಿಕೊಂಡಿತು. ಆಕಸ್ಮಿಕವಾಗಿ ನಡೆದ ಘಟನೆಯಿಂದ ಕೆಲ ಪ್ರಯಾಣಿಕರು ಗಾಬರಿಯಿಂದ ಓಡಿ ದೂರ ಸರಿದರೆ ಇನ್ನು ಕೆಲವರು ಮಂಗನ ಮೇಲೆ ಮರಕಪಟ್ಟು ಬಾಟಲಿಯಲ್ಲಿದ್ದ ನೀರನ್ನು ಮಂಗನಿಗೆ ಕುಡಿಸಿದರು.
ನೀರು ಕುಡಿದು ದಣಿವಾರಿಸಿಕೊಂಡ ಮಂಗ ಕೆಲ ಕ್ಷಣಗಳಲ್ಲಿ ಅಲ್ಲಿಂದ ತಟ್ಟನೆ ಓಡಿ ಹೋಯಿತು. ಘಟನೆಯ ಬಳಿಕ ಬಿಸಿಲಿನ ತೀವ್ರತೆಯ ನಡುವೆ ಮನುಷ್ಯರಷ್ಟೇ ಅಲ್ಲ ಪ್ರಾಣಿಗಳಿಗೂ ನೀರಿನ ಕೊರತೆ ಎಷ್ಟು ತೀವ್ರವಾಗಿದೆ ಎಂಬುದರ ಕುರಿತು ಪ್ರಯಾಣಿಕರ ಮಧ್ಯೆ ಸಾರಿಗೆ ನಿಲ್ದಾಣದಲ್ಲಿ ಚರ್ಚೆಗಳು ನಡೆಯುತ್ತಲೇ ಇತ್ತು!
-ಸುಕುಮಾರ್