ವೀರಾಜಪೇಟೆ, ಮಾ. ೧೧: ವೀರಾಜಪೇಟೆಯ ಕಾವೇರಿ ಶಾಲೆಯಲ್ಲಿ ಯು.ಕೆ.ಜಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಹಾಗೂ ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಸುದೇಶ್, ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಅಂತಿಮ ಹಂತದಲ್ಲಿ ಹೇಗೆ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಬೇಕು ಎಂಬುದನ್ನು ತಿಳಿಸಿ ಶುಭ ಹಾರೈಸಿದರು.
ಪೋಷಕ ಶಿಕ್ಷಕ ಸಮಿತಿ ಸದಸ್ಯ ಸುಮೇಶ್ ಮಾತನಾಡಿ, ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಸತತ ಪ್ರಯತ್ನದಿಂದ ಮಾತ್ರ ಸಾಧನೆ ಸಾಧ್ಯ ಎಂಬ ಹಿತನುಡಿಗಳೊಂದಿಗೆ ಶುಭ ಹಾರೈಸಿದರು.
ಯು.ಕೆ.ಜಿ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯ ಶಿಕ್ಷಕಿ ಪಾರ್ವತಿ ಪಿ.ಯು ಪದವಿ ಪ್ರದಾನ ಮಾಡಿದರು. ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಸುದೇಶ್ ಬಿ.ಎಸ್ ಹಾಗೂ ಕಾರ್ಯದರ್ಶಿ ವಿನೋದ್ ಪಿ.ಎನ್ ಶುಭ ಹಾರೈಸಿದರು. ಕಳೆದ ಶೈಕ್ಷಣಿಕ ವರ್ಷ ೨೦೨೪-೨೫ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ ತೃತೀಯ ಸ್ಥಾನವನ್ನು ಗಳಿಸಿದ ವಿದ್ಯಾರ್ಥಿ ಹಾಗೂ ವಿಷಯವಾರು ಅತ್ಯುತ್ತಮ ಸ್ಥಾನವನ್ನು ಗಳಿಸಿದಂತಹ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಫಲಕಗಳನ್ನು ಸಂಯೋಜಕಿ ಅಮೃತ ಅರ್ಜುನ್ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯೊಂದಿಗಿನ ಒಡನಾಟದ ಬಗ್ಗೆ ವಿದ್ಯಾರ್ಥಿಗಳಾದ ಕಾವೇರಮ್ಮ ಎಂ.ಜಿ, ದೀಪ್ತಿ ತಂಗಮ್ಮ, ಹನಾ ಪಲಕ್, ಹೈಜಾ, ಸುಹಾನಿ ಪುರೋಹಿತ್ ಹಾಗೂ ಜೋಯಾ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ೨೦೨೪-೨೫ನೇ ಸಾಲಿನಲ್ಲಿ ತರಗತಿವಾರು ಅತ್ಯುತ್ತಮ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಪೋಷಕ ಶಿಕ್ಷಕ ಸಮಿತಿ ಸದಸ್ಯ ಸುಮೇಶ್ ಅಭಿನಂದನಾ ಫಲಕಗಳನ್ನು ವಿತರಿಸಿದರು. ಕಳೆದ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳ ಮಾರ್ಗದರ್ಶಕರಿಗೆ ನಗದು ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಹ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.