ಮಡಿಕೇರಿ, ಮಾ. ೧೧: ಮಹಿಳೆಯರಲ್ಲಿ ಹೆಚ್ಚುತ್ತಿರುವ ಗರ್ಭಕಂಠದ ಕ್ಯಾನ್ಸರ್ ತಡೆಗೆ, ೧೪ ರಿಂದ ೧೬ ವರ್ಷ ವಯಸ್ಸಿನ ಬಾಲಕಿಯರಿಗೆ ಕೇಂದ್ರ ಸರಕಾರದ ವತಿಯಿಂದ ಹೆಚ್.ಪಿ.ವಿ ಲಸಿಕೆಯನ್ನು ನೀಡುವ ಕಾರ್ಯಕ್ರಮಕ್ಕೆ ಇಂದು ಜಿಲ್ಲಾಸ್ಪತ್ರೆಯಲ್ಲಿ ಚಾಲನೆ ನೀಡಲಾಯಿತು.
ಲಸಿಕೆಯ ೧೦೦ ಡೋಸ್ಗಳು ಸದ್ಯಕ್ಕೆ ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿದ್ದು, ೧೪ ರಿಂದ ೧೬ ವರ್ಷದ ಬಾಲಕಿಯರು ಈ ಉಚಿತ ಲಸಿಕೆಯ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಶಸ್ತçಚಿಕಿತ್ಸಕ ಡಾ.ನಂಜುAಡಯ್ಯ ಅವರು ಮಾಹಿತಿ ನೀಡಿದರು. ಈ ಸಂದರ್ಭ ವೈದ್ಯಕೀಯ ಅಧೀಕ್ಷಕ ಡಾ.ಸೋಮಶೇಖರ್, ಆರ್.ಎಮ್.ಒ ಡಾ.ಧನಂಜಯ್ ಹಾಗೂ ಡಾ.ಅಭಿನಂದನ್ ಹಾಜರಿದ್ದರು.
ಕೇಂದ್ರ ಸರಕಾರ ಉದ್ದೇಶಿತ ಈ ಲಸಿಕಾ ಕಾರ್ಯಕ್ರಮ, ೧೨ ಕೋಟಿ ಬಾಲಕಿಯರಿಗೆ ಹೆಚ್.ಪಿ.ವಿ (ಹ್ಯೂಮನ್ ಪ್ಯಾಪಿಲೋಮಾವೈರಸ್) ಲಸಿಕೆ ನೀಡುವ ಗುರಿ ಹೊಂದಿದೆ. ದೇಶದ ವಿವಿಧೆಡೆ ಲಸಿಕಾ ಕಾರ್ಯಕ್ರಮ ಆರಂಭವಾಗಿದ್ದು, ಕೊಡಗು ಜಿಲ್ಲೆಯಲ್ಲಿ ಇಂದು ಚಾಲನೆ ದೊರಕಿದೆ.
ಗರ್ಭಕಂಠದ ಕ್ಯಾನ್ಸರ್ಗೆ ಹೆಚ್.ಪಿ ವೈರಸ್ ಪ್ರಮುಖ ಕಾರಣವಾಗಿದ್ದು, ಪ್ರೌಢತೆ ತಲುಪದ ಬಾಲಕಿಯರಿಗೆ ಹೆಚ್.ಪಿ.ವಿ ತಡೆ ಲಸಿಕೆ ನೀಡುವ ಮೂಲಕ ಭವಿಷ್ಯದಲ್ಲಿ ಅವರುಗಳಿಗೆ ಸಂಭವಿಸಬಹುದಾದ ಗರ್ಭಕಂಠದ ಕ್ಯಾನ್ಸರ್ ಅನ್ನು ತಡೆಯಬಹುದಾಗಿದೆ. ವಿಶ್ವದ ಇತರ ೧೬೦ ದೇಶಗಳೊಂದಿಗೆ ಭಾರತವು ಈ ಲಸಿಕಾ ಕಾರ್ಯಕ್ರಮದ ಮೂಲಕ ದಿಟ್ಟ ಹೆಜ್ಜೆ ಇಟ್ಟು ಹೋರಾಟಕ್ಕೆ ಪದಾರ್ಪಣೆಗೈದಿದೆ ಎಂದು ಕಳೆದ ವಾರ ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಮಾಹಿತಿ ನೀಡಿದ್ದರು.