ಮುಳ್ಳೂರು, ಮಾ. ೧೨: ಅಕ್ರಮವಾಗಿ ಅರಣ್ಯದಲ್ಲಿ ಕಾಡುಪ್ರಾಣಿಯನ್ನು ಬೇಟಿಯಾಡಿ ಕಾಡುಕುರಿಯನ್ನು ಕೊಂದು ಅದನ್ನು ಮನೆಗೆ ತಂದು ಮಾಂಸವಾಗಿ ತಯಾರಿಸುತ್ತಿರುವ ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದಾಳಿ ಮಾಡಿ ಆರೋಪಿಯನ್ನು ಬಂಧಿಸಿ ಆರೋಪಿಗೆ ಸೇರಿದ ಬಂದೂಕು ಸೇರಿದಂತೆ ಕಾಡುಕುರಿ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ನಿಡ್ತ ಗ್ರಾ.ಪಂ. ವ್ಯಾಪ್ತಿಯ ಜಾಗೇನಹಳ್ಳಿ ಗ್ರಾಮದ ಡಿ.ಎಸ್.ಸುರೇಶ್ ಬಂಧಿತ ಆರೋಪಿ. ಸುರೇಶ್ ಮತ್ತು ಸಂಗಡಿಗರು ಸೇರಿಕೊಂಡು ಪಕ್ಕದ ಕಾಡಿನಲ್ಲಿ ಅಕ್ರಮವಾಗಿ ಕಾಡುಪ್ರಾಣಿಯನ್ನು ಬೇಟೆಯಾಡಲು ಹೋಗಿದ್ದರು. ಈ ಪೈಕಿ ಕಾಡುಕುರಿಯನ್ನು ಬೇಟೆಯಾಡಿದ ಆರೋಪಿಗಳು ಜಾಗೇನಹಳ್ಳಿ ಗ್ರಾಮದ ಡಿ.ಎಸ್.ಸುರೇಶ್ ಅವರ ಮನೆಯಲ್ಲಿ ಬೇಟೆಯಾಡಿ ಕೊಂದ ಕಾಡುಕುರಿಯನ್ನು ಮಾಂಸವನ್ನಾಗಿ ತಯಾರಿಸುತ್ತಿರುವ ಸುಳಿವಿನ ಮೇರೆ ಡಿಸಿಎಫ್ ಮತ್ತು ಸೋಮವಾರಪೇಟೆ ಎಸಿಎಫ್ ಮಾಗದರ್ಶನದಂತೆ ಶನಿವಾರಸಂತೆ ವಲಯಾಧಿಕಾರಿ ಡಿ.ವಿ.ಪೂಜಾಶ್ರೀ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ಅಧಿಕಾರಿಗಳು ಸ್ಥಳದಲ್ಲೇ ಆರೋಪಿ ಸುರೇಶ್‌ನನ್ನು ಬಂಧಿಸಿದ್ದಾರೆ. ಈ ಸಂದರ್ಭ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಸುರೇಶ್‌ಗೆ ಸೇರಿದ ಬಂದೂಕು ಮತ್ತು ಕಾಡುಕುರಿ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಒ ವಿಕ್ರಮ್, ಗಸ್ತು ಅರಣ್ಯ ಪಾಲಕ ಭರ್ಮಪ್ಪ, ಕರೇಪ್ಪ ಪೂಜಾರಿ ಸಿಬ್ಬಂದಿಗಳಾದ ಹರೀಶ್, ಆನಂದ, ನಾಗೇಶ್, ಗೋಪಿ, ಉಮೇಶ್, ಚಂದನ್ ಪಾಲ್ಗೊಂಡಿದ್ದರು.

- ಭಾಸ್ಕರ್ ಮುಳ್ಳೂರು