ಟೆಹರಾನ್, ಮಾ. ೧೭: ಇರಾನ್‌ನಲ್ಲಿ ಸೋಮವಾರ ರಾತ್ರಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ ಭದ್ರತಾ ಮಂಡಳಿಯ ಮುಖ್ಯಸ್ಥ ಅಲಿ ಲಾರಿಜಾನಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ಅವರು ಮಂಗಳವಾರ ಹೇಳಿದ್ದಾರೆ.
ಆದರೆ ಲಾರಿಜಾನಿ ಹತ್ಯೆಯ ಬಗ್ಗೆ ಇರಾನ್‌ನಿಂದ ಯಾವುದೇ ಪ್ರತಿಕ್ರಿಯೆ ಇದುವರೆಗೂ ಬಂದಿಲ್ಲ. ವೈಮಾನಿಕ ಕಾರ್ಯಾಚರಣೆಯಲ್ಲಿ ಟೆಹ್ರಾನ್‌ನ ಕಮಾಂಡ್ ಕೇಂದ್ರಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾಯಿತು, ಮಾನವರಹಿತ ವಾಯುವಾಹಕ ಧಾಳಿಯ ಮೂಲಕ ಇರಾನ್‌ನ ಕ್ಷಿಪಣಿ ಮತ್ತು ವಾಯು ರಕ್ಷಣಾ ಸಂಗ್ರಹಣಾ ತಾಣಗಳನ್ನು ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್ ಭದ್ರತಾ ಪಡೆ ಪ್ರಕಟಣೆ ತಿಳಿಸಿದೆ. ಇರಾನ್ ಮಿಲಿಟರಿ ಅಧಿಕಾರಿ ಘೋಲಮ್ರೆಜಾ ಸೊಲೈಮಾನಿ ಅವರನ್ನು ಕೊಂದಿರುವುದಾಗಿಯೂ ಪ್ರಕಟಣೆ ಹೇಳಿದೆ.
ಮುಂದುವರಿದ ದಾಳಿ - ಪ್ರತಿದಾಳಿ
ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಪರಿಸ್ಥಿತಿ ತೀವ್ರಗೊಂಡಿದ್ದು, ಇಸ್ರೇಲ್ ದೇಶವು ಇರಾನ್ ರಾಜಧಾನಿ ಟೆಹ್ರಾನ್ ಮತ್ತು ಲೆಬನಾನ್ ದೇಶದ ರಾಜಧಾನಿ ಬೈರೂತ್ ಮೇಲೆ ಭಾರೀ ವಾಯುದಾಳಿಗಳನ್ನು ನಡೆಸಿದೆ.
ಈ ದಾಳಿಗಳಿಗೆ ಪ್ರತಿಯಾಗಿ ಇರಾನ್ ದೇಶವು ಕ್ಷಿಪಣಿಗಳು ಮತ್ತು ಡ್ರೋನ್ ಮೂಲಕ ಇಸ್ರೇಲ್ ಪ್ರದೇಶಗಳ ಮೇಲೆ ಪ್ರತಿದಾಳಿ ನಡೆಸಿದ್ದು ಇದರಿಂದ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದು, ಪರಿಸ್ಥಿತಿ ಅತ್ಯಂತ ಸೂಕ್ಷö್ಮವಾಗಿದೆ.
ಲೆಬನಾನ್ನಲ್ಲಿ ದಾಳಿಗಳ ಪರಿಣಾಮವಾಗಿ ನಾಗರಿಕರು ತಮ್ಮ ಮನೆಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ಹಲವೆಡೆ ಭಾರೀ ಹಾನಿ ಉಂಟಾಗಿದ್ದು, ಸಾವು-ನೋವುಗಳ ಸಂಖ್ಯೆ ಹೆಚ್ಚುತ್ತಿವೆ.
ಇರಾನ್‌ನಿಂದ ಪ್ರತೀಕಾರದ ಎಚ್ಚರಿಕೆ
ಈ ನಡುವೆ ಇರಾನ್ ನೌಕಾಪಡೆಯ ಕಮಾಂಡರ್ ಕಠಿಣ ಎಚ್ಚರಿಕೆಯನ್ನು ನೀಡಿ ಶ್ರೀಲಂಕಾದ ಕರಾವಳಿಯಲ್ಲಿ ಐರಿಸ್ ಡೇನಾ ಹಡಗಿನ ಧ್ವಂಸಕ್ಕೆ ಪ್ರತೀಕಾರ ತೀರಿಸಿಕೊಳ್ಳದೆ ಬಿಡುವುದಿಲ್ಲ ಎಂದಿದ್ದಾರೆ.
ಐರಿಸ್ ಡೇನಾ ಹಡಗನ್ನು ಯು.ಎಸ್ ಜಲಾಂತರ್ಗಾಮಿ, ತಾ.೧೪ ರಂದು ಧ್ವಂಸಗೊಳಿಸಿ ಸುಮಾರು ೮೦ ಮಂದಿ ಇರಾನ್ ನೌಕಾದಳದ ಸಿಬ್ಬಂದಿಯನ್ನು ಬಲಿಪಡೆದಿತ್ತು.
ಇರಾನಿನ ಸೇನಾ ಮುಖ್ಯಸ್ಥ ಮೇಜರ್ ಜನರಲ್ ಅಮೀರ್ ಹಟಮಿ ಅವರು, ಯುದ್ಧನೌಕೆ ಸಿಬ್ಬಂದಿಗಳ ಸಾವುಗಳಿಗೆ ಉತ್ತರಿಸದೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಇಂದೂ ಕೂಡ ಇರಾನ್, ಇಸ್ರೆಲ್ ಮೇಲೆ ತನ್ನ ಶಕ್ತಿಶಾಲಿ ಕ್ಷಿಪಣಿಗಳಿಂದ ದಾಳಿ ನಡೆಸಿದೆ. ಅಲ್ಲದೆ ಕತಾರ್, ಸೌದಿ ಅರೇಬಿಯಾ, ಯುಎಇ, ಬಹ್ರೇನ್, ಕುವೈತ್‌ನ ಅಮೆರಿಕ ರಾಯಭಾರ ಕಚೇರಿ, ಸೇನಾ ನೆಲೆಗಳ ಮೇಲೆ ಕೂಡ ಧಾಳಿ ನಡೆಸಿದೆ.
ಇಂಧನ ಕೊರತೆಯಿಂದ ಶ್ರೀಲಂಕಾದಲ್ಲಿ ಗಂಭೀರ ಪರಿಸ್ಥಿತಿ
ಪಶ್ಚಿಮ ಏಷ್ಯಾದ ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧದಿಂದ ಶ್ರೀಲಂಕಾದಲ್ಲಿ ಇಂಧನ ಕೊರತೆಯ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದ್ದು ಅಲ್ಲಿನ ಸರ್ಕಾರ ವಾರಕ್ಕೆ ೪ ದಿನ ಮಾತ್ರ ಕೆಲಸ ಘೋಷಣೆ ಮಾಡಿದೆ. “ತಾ.೧೮ ರಿಂದ(ಇAದಿನಿAದ) ಜಾರಿಗೆ ಬರುವಂತೆ ಪ್ರತಿ ಬುಧವಾರವನ್ನು ಸಾರ್ವಜನಿಕ ರಜಾ ದಿನವೆಂದು ಘೋಷಿಸಲಾಗಿದೆ” ಎಂದು ಶ್ರೀಲಂಕಾದ ಅಗತ್ಯ ಸೇವೆಗಳ ಆಯುಕ್ತ ಜನರಲ್ ಪ್ರಭಾತ್ ಚಂದ್ರಕೀರ್ತಿ ಹೇಳಿದ್ದಾರೆ. ಇದು ಆರೋಗ್ಯ, ಬಂದರುಗಳು, ನೀರು ಸರಬರಾಜು ಮತ್ತು ಕಸ್ಟಮ್‌ಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತ ಮಧ್ಯ ಪ್ರವೇಶಕ್ಕೆ ಫಿನ್‌ಲ್ಯಾಂಡ್ ಕರೆ
ಯುದ್ಧವನ್ನು ನಿಲ್ಲಿಸಲು ಯತ್ನಿಸುವಂತೆ ಭಾರತಕ್ಕೆ ಫಿನ್‌ಲ್ಯಾಂಡ್ ಕರೆ ನೀಡಿದೆ. ಅಮೆರಿಕ ಮತ್ತು ಇರಾನ್ ಮಧ್ಯೆ ಸಂದಾನ ಮಾಡಿ, ಬಿಕ್ಕಟ್ಟು ಶಮನಗೊಳಿಸಲು ಭಾರತ ಮಧ್ಯಸ್ಥಿಕೆ ವಹಿಸಲಿ ಎಂದು ಫಿನ್‌ಲ್ಯಾಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಸಲಹೆ ನೀಡಿದ್ದಾರೆ.
“ನಮಗೆ ಈಗ ಯುದ್ಧವಿರಾಮ ಬೇಕಿದೆ. ಇದರಲ್ಲಿ ಭಾರತ ಭಾಗಿಯಾಗಬಹುದಾ ಎನ್ನುವ ಕುತೂಹಲ ಇದೆ. ಬಿಕ್ಕಟ್ಟು ಶಮನಗೊಳಿಸಲು ಯುದ್ಧ ವಿರಾಮ ಏರ್ಪಡುವಂತೆ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಕರೆ ಕೊಟ್ಟಿರುವುದನ್ನು ನಾವು ಗಮನಿಸಿದ್ದೇವೆ” ಎಂದು ಅಲೆಕ್ಸಾಂಡರ್ ಸ್ಟಬ್ ಹೇಳಿದ್ದಾರೆ.
ಭಾರತ ಹೆಚ್ಚಿನ ದೇಶಗಳೊಂದಿಗೆ ಉತ್ತಮ ಸಂಬAಧ ಇರಿಸಿಕೊಂಡಿದೆ. ಅಮೆರಿಕ, ಇರಾನ್ ಮತ್ತು ಇಸ್ರೇಲ್, ಈ ಮೂರೂ ದೇಶಗಳೊಂದಿಗೆ ಭಾರತಕ್ಕೆ ಉತ್ತಮ ಸಂಬAಧ ಇದೆ. ಯಾರೊಂದಿಗೆ ಬೇಕಾದರೂ ಮಾತುಕತೆ ನಡೆಸುವ ಸ್ಥಿತಿಯಲ್ಲಿ ಭಾರತ ಇದೆ ಎಂದು ಅವರು ಹೇಳಿದ್ದಾರೆ. ಮೋದಿ ಮತ್ತು ಜೈಶಂಕರ್ ಅವರ ಮಾತುಕತೆಯ ಪರಿಣಾಮವಾಗಿ ಹಾರ್ಮುಜ್ ಜಲಸಂಧಿ ಮೂಲಕ ಕೆಲ ಭಾರತೀಯ ಗ್ಯಾಸ್ ಟ್ಯಾಂಕರ್‌ಗಳಿಗೆ ಸಾಗಲು ಇರಾನ್ ಅನುಮತಿಸಿದೆ.
- ಕೋವರ್ ಕೊಲ್ಲಿ ಇಂದ್ರೇಶ್