*ಗೋಣಿಕೊಪ್ಪ, ಮಾ. ೧೭: ಮನುಷ್ಯನ ಜೀವಿತಾವಧಿಯಲ್ಲಿ ಪರೋಪಕಾರಿತನ ಬದುಕಿನ ಆದ್ಯ ಕರ್ತವ್ಯವಾಗಬೇಕು ಎಂದು ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಕಾವೇರಪ್ಪ ತಿಳಿಸಿದರು. ಗೋಣಿಕೊಪ್ಪ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆ ಆಯೋಜಿಸಿದ ವಿದ್ಯಾರ್ಥಿಗಳ ದತ್ತಿನಿಧಿ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಮನುಷ್ಯ ಸ್ವಾರ್ಥ ರಹಿತ ಬದುಕಿಗಾಗಿ, ಪರರ ಹಿತಕ್ಕಾಗಿ ಪ್ರಕೃತಿಯಂತೆ ತನ್ನದೆಲ್ಲ ನಿನ್ನದೇ ಎಂಬ ಮನೋಭಾವನೆಯಿಂದ ಜೀವನ ನಡೆಸಬೇಕು. ಇಂತಹ ಜೀವನ ನಡೆಸುವವರಿಗೆ ಆನಂದದ ಬದುಕು ವೃದ್ದಿಸುತ್ತದೆ ಎಂದು ಕಿವಿ ಮಾತು ಹೇಳಿದರು.

ಗೋಣಿಕೊಪ್ಪ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಅಧ್ಯಕ್ಷ ಬಿ.ಎನ್. ಪ್ರಕಾಶ್ ಮಾತನಾಡಿ, ಸಂಘ ಜೀವಿಯಾಗಿ, ಈ ಜೀವನದ ಮೌಲ್ಯಗಳೊಂದಿಗೆ ಸಮಾಜಮುಖಿಯಾಗಿ ಜನಪರ ನಿಲುವುಗಳೊಂದಿಗೆ ಜನ ಪ್ರಾಯೋಜಿತ ಕಾರ್ಯಕ್ರಮಗಳನ್ನ ಆiÀೆÆÃಜಿಸುವ ಮೂಲಕ ಸಿರಿಯಲ್ ಚೇಂಬರ್ ಇಂಟರ್‌ನ್ಯಾಷನಲ್ ಸಂಸ್ಥೆ ತನ್ನ ಕರ್ತವ್ಯವಾಗಿಸಿಕೊಂಡಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ದತ್ತಿನಿಧಿ ಪ್ರತಿಷ್ಠಾಪಿಸಿ ವಿತರಿಸಲಾಗುತ್ತಿದೆ. ಈ ಬಾರಿ ಮೂರು ವಿದ್ಯಾರ್ಥಿಗಳಿಗೆ ದತ್ತಿನಿಧಿಯನ್ನು ವಿತರಿಸಲಾಗುತ್ತಿದೆ.

ಜತೆಗೆ ಸಂಸ್ಥೆಯು ಕಾನೂನು ಅರಿವು ಕಾರ್ಯಾಗಾರ, ರಕ್ತದಾನ ಶಿಬಿರ ಸೇರಿದಂತೆ ಹಲವಾರು ಜನಪರ ಕಾರ್ಯ ಕ್ರಮಗಳನ್ನು ಕೈಗೆತ್ತಿಕೊಂಡು ನಿಭಾಯಿಸಿದೆ ಎಂದು ಹೇಳಿದರು.

ಕಾವೇರಿ ಕಾಲೇಜಿನ ವಿದ್ಯಾರ್ಥಿಗಳಾದ ಕೆ.ಆರ್ ಅಂಜಲಿ, ಎಂ.ಕೆ ಮುತ್ತಮ್ಮ, ಕೆ.ಬಿ ಅಂಕಿತ ಚೋಂದಮ್ಮ ಇವರುಗಳಿಗೆ ತಲಾ ಹತ್ತು ಸಾವಿರ ರೂಪಾಯಿಗಳಂತೆ ದತ್ತಿ ನಿಧಿಯನ್ನು ವಿತರಿಸಲಾಯಿತು. ಇದೆ ಸಂದರ್ಭದಲ್ಲಿ, ಕಾವೇರಿ ಕಾಲೇಜಿನ ಪ್ರಾಂಶುಪಾಲ ಕಾವೇರಪ್ಪ ಅವರನ್ನು ಸನ್ಮಾನಿಸಲಾಯಿತು.

ನೂತನ ಪಿಪಿಎಫ್‌ಗಳಾಗಿ ಆಯ್ಕೆಯಾದ ಎಸ್.ಎಸ್ ತಿಮ್ಮಯ್ಯ, ಕೆ.ಬಿ ಸಂಜೀವ್, ಆಶಿಕ್ ಚಂಗಪ್ಪ, ಮೆಕೇರಿರ ಮೋಹನ್, ಜಿತೇಂದ್ರ, ಮೂಕಳೇರ ದಿಲ್‌ಕುಮಾರ್ ಈ ಆರು ಸದಸ್ಯರುಗಳಿಗೆ ಸಂಸ್ಥೆಯ ಪಿನ್ ವಿತರಣೆ ಮಾಡಲಾಯಿತು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪಿಪಿಎಫ್ ನಾಗೇಶ್ ವರ್ಣೇಕರ್ ವಾರ್ಷಿಕ ವರದಿ ವಾಚಿಸಿದರು. ರಾಷ್ಟ್ರೀಯ ಸಂಯೋಜಕ ಎಂ.ಎನ್ ಉತ್ತಪ್ಪ ಸಂಸ್ಥೆಯ ಕ್ರಿಯಾತ್ಮಕ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಖಜಾಂಜಿ ಪಿಪಿಎಫ್ ಮೆಕೇರಿರ ಮೋಹನ್ ಸೇರಿದಂತೆ ನಿಕಟಪೂರ್ವ ಅಧ್ಯಕ್ಷರುಗಳು, ಹಿರಿಯ ಪಿಪಿಎಫ್‌ಗಳು, ಸದಸ್ಯರುಗಳು ಹಾಜರಿದ್ದರು.