ವೀರಾಜಪೇಟೆ, ಮಾ. ೧೭: ವೀರಾಜಪೇಟೆ ಪುರಸಭೆ ವ್ಯಾಪ್ತಿಯ ವಾಹನ ಶುಲ್ಕ ಎತ್ತಾವಳಿ, ಮಾಂಸ ಮತ್ತು ಮೀನು ಮಳಿಗೆಗಳ ವಾರ್ಷಿಕ ಮರು ಹರಾಜಿನಲ್ಲಿ ಬಿಡ್ಡುದಾರರಿಂದ ಸೂಕ್ತ ಸ್ಪಂದನ ಬಾರದೆ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆ ಬಾಕಿ ಉಳಿದ ಮಳಿಗೆ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಗಿದೆ.

ತಾ. ೧೨ ರಂದು ಪುರಸಭೆಯ ವಾರ್ಷಿಕ ಹರಾಜಿನಲ್ಲಿ ಸೂಕ್ತ ಬೆಲೆ ದೊರೆಯದೆ, ಕಳೆದ ಸಾಲಿಗಿಂತ ಕಡಿಮೆ ಆದಾಯ ಬಂದ ಕಾರಣ ಹರಾಜನ್ನು ಮುಂದೂಡಲಾಗಿತ್ತು.

ಹರಾಜಾಗದೇ ಉಳಿದಿದ್ದ ಕುರಿಮಾಂಸದ ಐದು ಮಳಿಗೆಯ ಹರಾಜಿನಲ್ಲಿ ಮೂರು ಮಳಿಗೆ ಮಾತ್ರ ಹರಾಜಾಗಿದ್ದು ಅದರಲ್ಲಿಯೂ ಕಡಿಮೆ ಆದಾಯ ಬಂದಿದೆ. ಇನ್ನೂ ಹಸಿ ಮೀನಿನ ೪ ಮಳಿಗೆ ಮತ್ತು ಕೋಳಿ ಮಾಂಸದ ಮೂರು ಮಳಿಗೆ, ಹಂದಿ ಮಾಂಸ ಮಳಿಗೆ ಹರಾಜನ್ನು ತಾ. ೨೪ ರಂದು ಬೆಳಿಗೆ ೧೧ ಗಂಟೆಗೆ ಹರಾಜು ನಡೆಸಲು ನಿರ್ಧರಿಸಿ ಮುಂದೂಡಲಾಗಿದೆ. ಪುರಸಭೆ ಮುಖ್ಯಾಧಿಕಾರಿ ನಾಚಪ್ಪ ಮುಂದಾಳತ್ವದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಪುರಸಭೆ ವ್ಯಾಪ್ತಿಯ ರಸ್ತೆಗಳಲ್ಲಿ ವಾಹನ ಶುಲ್ಕ ಹರಾಜಿನ ವೇಳೆ ಬಿಡ್ಡುದಾರರು ನಿರಾಸÀಕ್ತಿ ತೋರಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿ ಪುರಸಭೆ ಮುಖ್ಯಾಧಿಕಾರಿ ಪಟ್ಟಚೆರುವಂಡ ನಾಚಪ್ಪ, ವಾಹನ ಶುಲ್ಕದಲ್ಲಿ ಆಗುತ್ತಿರುವ ಸಮಸ್ಯೆಯನ್ನು ಬಿಡ್ಡುದಾರರು ತಿಳಿಸಿದ್ದಾರೆ. ಅವರ ಕೋರಿಕೆಯಾದ ಶುಲ್ಕ ವಸೂಲಾತಿ ಕೈ ಬಿಡುವ ವಿಚಾರವಾಗಿ ಉನ್ನತ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತೇನೆ. ಇಂದಿನ ಮರು ಹರಾಜಿನಲ್ಲಿ ಮೂರು ಕುರಿ ಮಾಂಸ ಮಳಿಗೆ ಹರಾಜಾಗಿದ್ದು, ೧ ಲಕ್ಷ ೮ ಸಾವಿರ, ೨೪ ಸಾವಿರ ರೂ ಮತ್ತು ೯೩ ಸಾವಿರದ ಐನೂರು ರೂ ಆದಾಯ ಬಂದಿದ್ದು, ಕಳೆದ ಸಾಲಿಗಿಂತ ಕಡಿಮೆಯಾಗಿದೆ. ಇನ್ನು ಎರಡು ಮಳಿಗೆ ಬಾಕಿ ಉಳಿದಿದೆ, ಹಂದಿ ಮಾಂಸದ ಮಳಿಗೆಗೆ ಕಡಿಮೆ ಆದಾಯ ಕಾರಣ ಅದನ್ನು ಮುಂದೂಡಲಾಗಿದೆ.

ಹಸಿ ಮೀನಿನ ನಾಲ್ಕು ಮಳಿಗೆ ಮತ್ತು ಮೂರು ಕೋಳಿ ಮಾಂಸದ ಮಳಿಗೆಯನ್ನು ಮತ್ತೆ ತಾ ೨೪ ರಂದು ಮರು ಹರಾಜು ನಡೆಸಲಾಗುತ್ತದೆ. ಪ್ರಕ್ರಿಯೆಯಲ್ಲಿ ಪುರಸಭೆ ಕಂದಾಯಾಧಿಕಾರಿ ಸೋಮೇಶ್, ವ್ಯವಸ್ಥಾಪಕರಾದ ಸುಜಾತ, ಸುಲೇಖಾ, ಐವಾನ್ ಸೇರಿದಂತೆ ಬಿಡ್ಡುದಾರರು, ಸಾರ್ವಜನಿಕರು ಭಾಗವಹಿಸಿದ್ದರು.