ಸಿದ್ದಾಪುರ, ಮಾ. ೧೭: ಜಿಲ್ಲೆಯಲ್ಲಿ ಆನೆ -ಮಾನವ ಸಂಘರ್ಷವನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಒತ್ತಾಯಿಸಿ ಏಪ್ರಿಲ್ ತಿಂಗಳಿನಲ್ಲಿ ಅರಣ್ಯ ಭವನ ಚಲೋ ಹಾಗೂ ಅರಣ್ಯ ಭವನ ಮುತ್ತಿಗೆ ಹಾಕಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕಾರ್ಮಿಕ ಸಂಘಟನೆಗಳು ನಿರ್ಣಯ ಕೈಗೊಂಡಿವೆ.

ಸಿದ್ದಾಪುರದ ಅಗಸ್ತೆö್ಯÃಶ್ವರ ಸಹಕಾರ ಸಂಘದ ಸಭಾಂಗಣದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅರಣ್ಯ ಇಲಾಖೆಯ ಕಾರ್ಯವೈಖರಿಯನ್ನು ಖಂಡಿಸಿ ಜಿಲ್ಲೆಯ ಜನತೆಯನ್ನು ಒಗ್ಗೂಡಿಸಿ ಏಪ್ರಿಲ್ ತಿಂಗಳಿನಲ್ಲಿ ಮಡಿಕೇರಿಯ ಅರಣ್ಯ ಭವನದ ಎದುರು ಬೃಹತ್ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.

ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿAದ ೫ ಮಂದಿ ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸರ್ಕಾರಗಳು ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಶಾಶ್ವತ ಯೋಜನೆಯನ್ನು ರೂಪಿಸದೆ ನಿರ್ಲಕ್ಷö್ಯ ವಹಿಸುತ್ತಿದೆ ಎಂದು ಮನು ಸೋಮಯ್ಯ ಆರೋಪಿಸಿದರು. ಇತ್ತೀಚೆಗೆ ಸಿದ್ದಾಪುರ ಸುತ್ತಮುತ್ತಲ ಭಾಗದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಕಾಫಿ ಬೆಳಗಾರ ಹಾಗೂ ಕಾರ್ಮಿಕರೊಬ್ಬರು ಸಾವನ್ನಪ್ಪಿದ್ದರು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಇಬ್ಬರನ್ನು ಕೊಂದ ಒಂಟಿ ಸಲಗವನ್ನು ಸೆರೆ ಹಿಡಿಯದೇ ಬೇರೊಂದು ಸಲಗವನ್ನು ಸೆರೆಹಿಡಿದು ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಇದಲ್ಲದೆ ಸೆರೆಹಿಡಿದ ಸಲಗವನ್ನು ಬಂಡಿಪುರ ಅರಣ್ಯಕ್ಕೆ ಬಿಟ್ಟಿದ್ದು, ಅದು ಮತ್ತೆ ಹಿಂತಿರುಗಿ ಬರುವ ಸಾಧ್ಯತೆ ಇರುವುದರಿಂದ ಮುಂದಿನ ದಿನಗಳಲ್ಲಿ ಸೆರೆ ಹಿಡಿಯುವ ಕಾಡಾನೆಗಳನ್ನು ಸಾಕಾನೆಗಳ ಶಿಬಿರಕ್ಕೆ ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿದರು. ಸಿದ್ದಾಪುರ ವ್ಯಾಪ್ತಿಯಲ್ಲಿ ಇಲ್ಲಿನ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ವಲಯ ಅರಣ್ಯ ಕಚೇರಿ ಪ್ರಾರಂಭಿಸಬೇಕು. ರೇಡಿಯೋ ಕಾಲರ್ ಅಳವಡಿಸಿರುವ ಆನೆಗಳ ಚಲನವಲನವನ್ನು ರೈತರಿಗೂ ಮಾಹಿತಿ ಸಿಗುವಂತೆ ಮಾಡಬೇಕು. ಬೆಳಗಾರ ಗಣಪತಿ ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ಆಧಾರದಲ್ಲಿ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಇನ್ನಿತರ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆದರೆ, ಕ್ರಮವಹಿಸಿಲ್ಲ ಎಂದು ಕಿಡಿಕಾರಿದರು. ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಕುಟುಂಬಗಳಿಗೆ ಒಂದು ಕೋಟಿ ಹಣವನ್ನು ಪರಿಹಾರ ರೂಪದಲ್ಲಿ ನೀಡಬೇಕು. ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಜವಾಬ್ದಾರಿ ಇದ್ದು, ಆನೆ ಮಾನವ-ಸಂಘರ್ಷವನ್ನು ತಡೆಗಟ್ಟಲು ಕ್ಷೇತ್ರದ ಸಂಸದರು ಕೂಡ ಮುಂದಾಗಬೇಕೆAದು ಮನು ಸೋಮಯ್ಯ ಒತ್ತಾಯಿಸಿದರು.

ಕಾರ್ಮಿಕ ಮುಖಂಡ ಪಿ.ಆರ್. ಭರತ್ ಮಾತನಾಡಿ, ಜಿಲ್ಲೆಯ ಜನ ಸಂಘಟಿತರಾಗಿ ಮಡಿಕೇರಿಯ ಅರಣ್ಯ ಭವನದ ಎದುರು ಹೋರಾಟ ನಡೆಸಬೇಕು. ಜಿಲ್ಲೆಯಲ್ಲಿ ವನ್ಯಪ್ರಾಣಿಗಳ ಮಿತಿಮೀರಿದ ಹಾವಳಿಯನ್ನು ತಡೆಗಟ್ಟಲು ಅರಣ್ಯ ಇಲಾಖೆ ವಿಫಲಗೊಂಡಿದ್ದು, ಕಾಡಾನೆ ದಾಳಿಗೆ ಸಿಲುಕಿ ಅಮಾಯಕರು. ಜೀವ ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಒತ್ತಾಯಿಸಿದರು.

ಇತ್ತೀಚೆಗೆ ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದ ನಿವಾಸಿ ಕಾಫಿ ಬೆಳೆಗಾರ ಚೌರಿರ ಗಣಪತಿ ಅವರನ್ನು ದಾಳಿ ನಡೆಸಿ ಕೊಂದ ಆನೆ ಗುಹ್ಯ ಗ್ರಾಮದ ಸುತ್ತಮುತ್ತಲೇ ಇದೆ ಎಂದು ಗಣಪತಿ ಅವರ ಸಂಬAಧಿ ದೂರಿದರು. ಜಿಲ್ಲೆಯಲ್ಲಿ ಆನೆ ಮಾನವ ಸಂಘರ್ಷ ಮಿತಿಮೀರಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ಜಿಲ್ಲೆಯ ಅಧಿಕಾರಿಗಳೊಂದಿಗೆ ಸಿದ್ದಾಪುರ ಸುತ್ತಮುತ್ತಲಿನ ಭಾಗಕ್ಕೆ ಭೇಟಿ ನೀಡಿ ಅರಣ್ಯ ಇಲಾಖೆ ಅಧಿಕಾರಿಗಳ ಬಳಿ ಮತ್ತು ಬೆರಳೆಣಿಕೆಯಷ್ಟು ಮಂದಿ ರೈತರ ಬಳಿ ಮಾಹಿತಿ ಪಡೆದುಕೊಂಡರು. ಆದರೆ ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ ಮೃತರ ಕುಟುಂಬದವರನ್ನು ಸೌಜನ್ಯಕ್ಕೂ ಭೇಟಿ ಮಾಡದೆ ಹಿಂತಿರುಗಿ ತೆರಳಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಕಾನೂನು ಸಲಹೆಗಾರರಾದ ಕೆ.ಬಿ. ಹೇಮಚಂದ್ರ, ಖಜಾಂಚಿ ಇಟ್ಟಿರ ಸಬಿತ ಭೀಮಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಅಮ್ಮತ್ತಿ ಹೋಬಳಿ ಅಧ್ಯಕ್ಷ ಚೇನಂಡ ಅಜಿತ್ ಪೂಣಚ್ಚ, ಉಪಾಧ್ಯಕ್ಷ ನಡಿಕೇರಿಯಂಡ ವಿಕ್ರಂ, ಕಾರ್ಮಿಕ ಸಂಘಟನೆಯ ರಮೇಶ್ ಕರ್ನಾಟಕ ರಾಜ್ಯ ರೈತ ಸಂಘದ ಪ್ರಮುಖರಾದ ಎಂ.ವಿ.ಸಜೀವನ್, ದೇವಣಿರ ವಜ್ರ ಬೋಪಣ್ಣ, ಇನ್ನಿತರರು ಹಾಜರಿದ್ದರು.