ಮಡಿಕೇರಿ, ಮಾ. ೨೦: ಜಿಲ್ಲೆಯಲ್ಲಿ ಗೃಹ ಬಳಕೆ ಅಡುಗೆ ಅನಿಲ ಸಂಪರ್ಕ ಹೊಂದಿರುವ ಪ್ರತಿ ಮನೆಗೂ ಅಡುಗೆ ಅನಿಲ ಸಿಲಿಂಡರ್ ಅನ್ನು ಪೂರೈಕೆ ಮತ್ತು ಬೇಡಿಕೆಗೆ ತಕ್ಕಂತೆ ಸರ್ಕಾರದ ನಿಯಮಾನುಸಾರ ಸರಬರಾಜು ಮಾಡುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಅಡುಗೆ ಅನಿಲ ವಿತರಕರ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಮೇರಿಕ ಮತ್ತು ಇಸ್ರೇಲ್ ದೇಶಗಳ ನಡುವಿನ ಯುದ್ಧ ತೀವ್ರಗೊಂಡಿರುವ ಪರಿಣಾಮವಾಗಿ ಅಡುಗೆ ಅನಿಲ ಪೂರೈಕೆ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದ್ದು, ಇದನ್ನು ನಿವಾರಿಸಬೇಕು. ಆ ನಿಟ್ಟಿನಲ್ಲಿ ಯಾರೂ ಸಹ ಆತಂಕಕ್ಕೆ ಒಳಗಾಗದಂತೆ ಗೃಹ ಬಳಕೆ ಅಡುಗೆ ಅನಿಲವನ್ನು ಪೂರೈಸಬೇಕು. ಸರ್ಕಾರ ಕಾಲ ಕಾಲಕ್ಕೆ ಹೊರಡಿಸುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಇಲ್ಲ. ಒಟ್ಟಾರೆ ಗ್ರಾಹಕರಿಗೆ ಗೃಹ ಬಳಕೆಯ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ರೀತಿ ವ್ಯತ್ಯಯ ಉಂಟಾಗದAತೆ ಗಮನಹರಿಸುವುದು ಅತ್ಯಗತ್ಯ. ಅನಧಿಕೃತ ದಾಸ್ತಾನು, ವಿತರಣೆ, ಕಾಳಸಂತೆಯಲ್ಲಿ ಮಾರಾಟ ಸೇರಿದಂತೆ ನಿಯಮಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕಬೇಕು. ವಿದ್ಯಾರ್ಥಿ ನಿಲಯ, ವಸತಿ ನಿಲಯಗಳು, ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು ಹಾಗೂ ಇತರೆ ಆದ್ಯತಾ ಸಂಸ್ಥೆಗಳಿಗೆ ಆದ್ಯತಾ ಮೇರೆಗೆ ಅನಿಲ ಸಿಲಿಂಡರ್ಗಳನ್ನು ಪೂರೈಕೆ ಮಾಡುವಂತೆ ಸೂಚನೆ ನೀಡಿದರು.
ಆದ್ಯತೆ ಮೇರೆಗೆ ಹಾಗೂ ನಿಗದಿತ ಅವಧಿಯೊಳಗಾಗಿ ಗೃಹಬಳಕೆ ಸಿಲಿಂಡರ್ಗಳ ಪೂರೈಕೆ ಮಾಡಬೇಕು, ಕಡ್ಡಾಯವಾಗಿ ಎಫ್ಐಎಫ್ಒ ಪ್ರಕಾರವೇ ಗೃಹಬಳಕೆ ಸಿಲಿಂಡರ್ಗಳ ವಿತರಣೆ ಮಾಡಬೇಕು. ಎಲ್ಪಿಜಿ ವಿತರಕರು ದಾಸ್ತಾನು ಕೊರತೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಹಿಸಬೇಕು, ಇಕೆವೈಸಿ ಆಗದೇ ಇರುವ ಗ್ರಾಹಕರಿಗೆ ತಕ್ಷಣವೇ ಇಕೆವೈಸಿ ಮಾಡಿಸಿಕೊಂಡು, ಅನಿಲ ಸಿಲಿಂಡರ್ ಸರಬರಾಜು ಮಾಡಬೇಕು ಅನಿಲ ಸಿಲಿಂಡರ್ಗಳ ಪೂರೈಕೆಯಲ್ಲಿ ಕೃತಕ ಅಭಾವ ಸೃಷ್ಟಿಸುವುದು ಹಾಗೂ ಗ್ರಾಹಕರಿಂದ ಅನಧಿಕೃತವಾಗಿ ಹೆಚ್ಚಿನ ಹಣ ವಸೂಲಿ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಗೃಹಬಳಕೆ ಸಿಲಿಂಡರ್ಗಳನ್ನು ಅನಧಿಕೃತವಾಗಿ ವಾಣಿಜ್ಯ ಉದ್ದೇಶಕ್ಕೆ ವಿತರಿಸಬಾರದು. ವಿತರಣೆ, ದಾಸ್ತಾನುಗಳ ವಿವರಗಳನ್ನು ಪ್ರತಿದಿನ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.
ಗೃಹ ಬಳಕೆ ಅಡುಗೆ ಅನಿಲ ಪೂರೈಕೆ ಸಂಬAಧ ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆಯಾಗದAತೆ ಕಾಳಜಿ ವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಅಗತ್ಯ ಎಚ್ಚರವಹಿಸುವಂತೆ ತಿಳಿಸಿದರು.
ಆಹಾರ ಇಲಾಖೆ ಉಪ ನಿರ್ದೇಶಕ ಎಂ.ಭೀಮರಾಯ ಮಾತನಾಡಿ, ಜಿಲ್ಲೆಯಲ್ಲಿ ೧,೮೧,೧೨೬ ಗೃಹ ಬಳಕೆಯ ಅಡುಗೆ ಅನಿಲ ಸಂಪರ್ಕ ಹೊಂದಿದ್ದು, ೬೦,೧೦೧ ಕುಟುಂಬಗಳು ಒಂದು ಗೃಹ ಬಳಕೆಯ ಅನಿಲ ಸಿಲಿಂಡರ್ ಸಂಪರ್ಕ, ಹಾಗೆಯೇ ೧,೨೧,೦೨೫ ಕುಟುಂಬಗಳು ೨ ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಹೊಂದಿವೆ. ಉಜ್ವಲ ಯೋಜನೆಯಡಿಯೂ ಸಹ ೧೨,೫೨೭ ಕುಟುಂಬಗಳು ಅಡುಗೆ ಅನಿಲ ಸಂಪರ್ಕ ಹೊಂದಿವೆ. ಒಟ್ಟಾರೆ ಜಿಲ್ಲೆಯಲ್ಲಿ ಗೃಹ ಬಳಕೆಯ ಮತ್ತು ಉಜ್ವಲ ಯೋಜನೆಯಡಿ ೧,೯೩,೬೫೩ ಕುಟುಂಬಗಳು ಅಡುಗೆ ಅನಿಲ ಸಂಪರ್ಕ ಹೊಂದಿವೆ. ಹಾಗೆಯೇ ಜಿಲ್ಲೆಯಲ್ಲಿ ೯,೬೦೧ ವಾಣಿಜ್ಯ ಬಳಕೆಗಾಗಿ ಅನಿಲ ಸಂಪರ್ಕ ಹೊಂದಿವೆ ಎಂದು ಅವರು ವಿವರಿಸಿದರು.
ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಾಗಿ ಜಿಲ್ಲೆಯಲ್ಲಿ ೧೬,೮೨೯ ಕುಟುಂಬಗಳು ಬುಕ್ಕಿಂಗ್ ಮಾಡಿದ್ದು, ಹಾಗೆಯೇ ವಾಣಿಜ್ಯ ಬಳಕೆಯ ಅಡುಗೆ ಅನಿಲ ೫೦೫ ಮಂದಿ ಸಿಲಿಂಡರ್ಗಾಗಿ ಬುಕ್ಕಿಂಗ್ ಮಾಡಿದ್ದಾರೆ. ಪೂರೈಕೆಯಾಗುವ ಅಡುಗೆ ಅನಿಲವನ್ನು ಆಯಾಯ ಸಂದರ್ಭದಲ್ಲಿ ಸರದಿಯಂತೆ ಅಡುಗೆ ಅನಿಲ ಪೂರೈಸಲಾಗುತ್ತದೆ ಎಂದು ಭೀಮರಾಯ ಅವರು ವಿವರಿಸಿದರು.
ಈಗಾಗಲೇ ಗ್ರಾಹಕರ ಕುಂದುಕೊರತೆ ಸಂಬAಧ ಸಹಾಯವಾಣಿ ತೆರೆಯಲಾಗಿದ್ದು, ಅನಿಲ ಸಿಲಿಂಡರ್ಗಳ ಕಾಳಸಂತೆ ಮಾರಾಟ, ಅನಧಿಕೃತ ದಾಸ್ತಾನು, ವಿತರಣೆ ಕುರಿತಂತೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶಿಸಿದರು.
ಈ ಸಂದರ್ಭ ಆಹಾರ ಇಲಾಖೆಯ ಉಪ ನಿರ್ದೇಶಕ ಭೀಮರಾಯ ಮಾತನಾಡಿ ಜಿಲ್ಲೆಯ ಎಲ್ಲಾ ತಾಲೂಕುಗಳ ಆಹಾರ ನಿರೀಕ್ಷಕರುಗಳು ಗ್ಯಾಸ್ ಏಜೆನ್ಸಿಗಳಿಗೆ ಹಾಗೂ ಹೊಟೇಲ್/ ಡಾಬಾಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸುವುದರೊಂದಿಗೆ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದರು. ಜಿಲ್ಲೆಯಲ್ಲಿ ಇರುವ ಐಒಸಿಎಲ್, ಬಿಪಿಸಿಎಲ್, ಎಚ್ಪಿಸಿಎಲ್ ಹೀಗೆ ವಿವಿಧ ಕಂಪೆನಿಯ ಒಟ್ಟು ೧೮ ಗ್ಯಾಸ್ ಏಜೆನ್ಸಿಸ್ ಸಂಸ್ಥೆಗಳ ಪ್ರತಿನಿಧಿಗಳು, ಆಹಾರ ನಿರೀಕ್ಷಕರು ಇತರರು ಇದ್ದರು.