ಗೋಣಿಕೊಪ್ಪಲು, ಮಾ. ೨೦: ಹಾತೂರು ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಂದಾಯ ಇಲಾಖೆ ನೌಕರರ ರೆವಿನ್ಯೂ ಕ್ರಿಕೆಟ್ ಪ್ರೀಮಿಯರ್ ಲೀಗ್‌ನಲ್ಲಿ ಆತಿಥೇಯ ಪೊನ್ನಂಪೇಟೆ ತಾಲೂಕು ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದು, ಸೋಮವಾರಪೇಟೆ ತಾಲೂಕು ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಮೊದಲು ಬ್ಯಾಟ್ ಮಾಡಿದ ಪೊನ್ನಂಪೇಟೆ ತಂಡವು ೮೨ ರನ್‌ಗಳನ್ನು ಕಲೆಹಾಕಿತು. ಸೋಮವಾರಪೇಟೆ ಮೊತ್ತವನ್ನು ಬೆನ್ನೆಟ್ಟಲಾರದೆ ಸೋಲು ಕಂಡಿತು. ಪೊನ್ನಂಪೇಟೆ, ವೀರಾಜಪೇಟೆ, ಮಡಿಕೇರಿ, ಕುಶಾಲನಗರ ಹಾಗೂ ಸೋಮವಾರಪೇಟೆಯ ತಾಲೂಕು ತಂಡಗಳು ಸೇರಿದಂತೆ ಜಿಲ್ಲಾಧಿಕಾರಿಗಳ ಹಾಗೂ ಉಪವಿಭಾಗಾಧಿಕಾರಿಗಳ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಪೊನ್ನಂಪೇಟೆ ತಾಲೂಕು ಸಂಘದ ಪದಾಧಿಕಾರಿಗಳಾದ ಸುಧೀಂದ್ರ, ಸೋಮವಾರಪೇಟೆ ತಾಲೂಕಿನ ತಹಶೀಲ್ದಾರ್ ಕೃಷ್ಣಮೂರ್ತಿ, ಸಮಾಜ ಸೇವಕರಾದ ಪುಲಿಯಂಡ ರೋಷನ್, ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಹೆಚ್.ಟಿ.ಅನೀಶ್, ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಜಿ.ಕೆ.ನಿತನ್, ಪ್ರಮುಖರಾದ ರವಿಚಂದ್ರ, ಉಮೇಶ್ ಸೇರಿದಂತೆ ಅನೇಕ ಇನ್ನಿತರರು ಭಾಗವಹಿಸಿದ್ದರು.