ಸಿದ್ದಾಪುರ, ಮಾ. ೨೦: ಬೆಳ್ಳಂಬೆಳಿಗ್ಗೆ ಒಂಟಿಸಲಗವೊAದು ಮನೆಯ ಸಮೀಪದಲ್ಲಿ ನಿಲ್ಲಿಸಿದ್ದ ಆಟೋರಿಕ್ಷಾದ ಮೇಲೆ ದಾಳಿ ನಡೆಸಿ ಜಖಂಗೊಳಿಸಿರುವ ಘಟನೆ ನೆಲ್ಲಿಹುದಿಕೇರಿ ಗ್ರಾಮದ ಬೆಟ್ಟದಕಾಡುವಿನಲ್ಲಿ ನಡೆದಿದೆ.
ಬೆಟ್ಟದಕಾಡು ಹಾಗೂ ನೆಲ್ಲಿಹುದಿಕೇರಿ ಗ್ರಾಮದ ಶ್ರೀ ಸತ್ಯನಾರಾಯಣ ದೇವಾಲಯದ ಸುತ್ತಮುತ್ತಲಿನಲ್ಲಿ ಹಾಗೂ ಎಂ.ಜಿ. ಕಾಲೋನಿ ಸುತ್ತಮುತ್ತಲಿನಲ್ಲಿ ಸಂಚರಿಸಿ ಕಾಫಿ ತೋಟದೊಳಗೆ ಕೂಡ ದಾಂಧಲೆ ನಡೆಸಿದೆ.
ಸಲಗವನ್ನು ಕಂಡ ಗ್ರಾಮಸ್ಥರು ದಿಕ್ಕಾಪಾಲಾಗಿ ಓಡಿ ಆನೆ ದಾಳಿಯಿಂದ ತಪ್ಪಿಸಿಕೊಂಡ ಘಟನೆಯೂ ವರದಿಯಾಗಿದೆ. ಬೆಟ್ಟದಕಾಡು ನಿವಾಸಿ ಹೆಚ್.ಟಿ. ಸುನಿಲ್ ಎಂಬವರ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಆಟೋರಿಕ್ಷಾದ ಮೇಲೆ ಆನೆ ದಾಳಿ ನಡೆಸಿ ದಂತದಿAದ ಆಟೋರಿಕ್ಷಾಕ್ಕೆ ಗುದ್ದಿದ ಪರಿಣಾಮ ಆಟೋರಿಕ್ಷಾ ಜಖಂಗೊAಡಿದೆ. ಒಂಟಿಸಲಗ ಗ್ರಾಮದಲ್ಲಿ ಸಂಚರಿಸಿದ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ ಮೇರೆಗೆ ಸ್ಥಳಕ್ಕೆ ಕುಶಾಲನಗರ ವಲಯ ಅರಣ್ಯ ಅಧಿಕಾರಿ ರಕ್ಷಿತ್ ಎನ್. ನಗರ್ ನೇತೃತ್ವದಲ್ಲಿ ಮೀನುಕೊಲ್ಲಿ ಶಾಖಾ ವ್ಯಾಪ್ತಿಗೆ ಒಳಪಡುವ ಉಪವಲಯ ಅರಣ್ಯ ಅಧಿಕಾರಿ ಸಚಿನ್ ನಿಂಬಾಳ್ಕರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದರು. ಬಳಿಕ ಡ್ರೋನ್ ಕ್ಯಾಮರವನ್ನು ಬಳಸಿ ಸಲಗದ ಚಲನವಲನವನ್ನು ಕಂಡು ಹಿಡಿದರು. ಸಲಗವು ಸಂಚರಿಸುವ ಕಾಫಿ ತೋಟಗಳಲ್ಲಿ ಕಾರ್ಯಾಚರಣೆಯನ್ನು ನಡೆಸಿ ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾದರು.
- ವಾಸು