ಕಣಿವೆ, ಮಾ. ೨೧: ಇತ್ತೀಚೆಗಷ್ಟೇ ಲಕ್ಷಾಂತರ ರೂಪಾಯಿ ವ್ಯಯಿಸಿ ನಿರ್ಮಾಣ ಮಾಡಿದ್ದ ಆಸ್ಪತ್ರೆಯ ಕಟ್ಟಡದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಳೆಯ ನೀರು ಕಟ್ಟಡದೊಳಗೆ ಸುರಿದು ಅವಾಂತರ ಸೃಷ್ಟಿಯಾದ ಘಟನೆ ಹೆಬ್ಬಾಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮದಲ್ಲಿ ಇರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಘಟಕದ ಹೆಚ್ಚುವರಿ ಕಾಮಗಾರಿ ಪೂರ್ಣಗೊಳಿಸಲಾಗಿತ್ತು.
ಆದರೆ ಕಳಪೆ ಕಾಮಗಾರಿ ನಡೆಸಿದ ಮಳೆ ನೀರು ಸೋರಿಕೆ ಯಾಗುತ್ತಿದೆ. ಆಸ್ಪತ್ರೆಯ ಮೇಲ್ಛಾವಣಿಯ ಮಳೆಯ ನೀರೆಲ್ಲಾ ಕೊಠಡಿಯೊಳಗೆ ಹರಿದು ಬಂದ ಪರಿಣಾಮ ಆಸ್ಪತ್ರೆಯ ಹಾಸಿಗೆ ಹಾಗೂ ಇತರೆ ಪರಿಕರಗಳು ಹಾಳಾಗಿವೆ. ಬಳಿಕ ಸಿಬ್ಬಂದಿ ಕೊಠಡಿಯಲ್ಲಿ ನಿಂತ ಮಳೆಯ ನೀರನ್ನು ಹೊರಹಾಕಲು ಹರಸಾಹಸಪಟ್ಟರು.