ನಾಪೋಕ್ಲು, ಮಾ. ೨೦: ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಉರೂಸ್ ಕಾರ್ಯಕ್ರಮಕ್ಕೆ ಜಮಾಅತ್ ಆಡಳಿತ ಮಂಡಳಿ ಪದಾಧಿಕಾರಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಆಹ್ವಾನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕೃತವಾಗಿ ಅವರ ಕಚೇರಿಯಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರ ನೇತೃತ್ವದಲ್ಲಿ, ತಾಜಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಎಂ ಹುಸೇನ್ ಸಖಾಫಿ, ಮಾಜಿ ಅಧ್ಯಕ್ಷ ಅಬೂಬಕರ್ ಸಖಾಫಿ, ಆಡಳಿತ ಮಂಡಳಿ ಸದಸ್ಯರಾದ ಮೆನ್ ಮಹಮ್ಮದ್, ಹನೀಫ್ ಎಮ್.ಎ. ಹಾಗೂ ಧರ್ಮ ಗುರುಗಳು ಭೇಟಿಯಾಗಿ ಆಹ್ವಾನ ಪತ್ರಿಕೆ ನೀಡಿ ಉರೂಸ್ ಸಮಾರಂಭಕ್ಕೆ ಆಹ್ವಾನಿಸಿದರು.
ಎಮ್ಮೆಮಾಡು ಉರೂಸ್ ಪ್ರಾಮುಖ್ಯತೆ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿಸಿದ ಶಾಸಕರು, ಸುಮಾರು ೪೦೦ ವರ್ಷಕ್ಕೂ ಅಧಿಕ ಇತಿಹಾಸ ಇರುವ ಈ ಉತ್ಸವಕ್ಕೆ, ಕರ್ನಾಟಕ ಮಾತ್ರವಲ್ಲದೇ ನೆರೆಯ ರಾಜ್ಯಗಳಿಂದಲೂ ಎಲ್ಲಾ ಧರ್ಮದ ಭಕ್ತರು ಆಗಮಿಸಿ ಪ್ರಾರ್ಥಿಸುತ್ತಾರೆ ಎಂದು ವಿವರಿಸಿದರು.
ಇದೇ ಸಂದರ್ಭ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ವಸತಿ ಸಚಿವ ಜಮೀರ್ ಅಹ್ಮದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಝೀರ್ ಅಹಮದ್, ಶಾಂತಿನಗರ ಶಾಸಕ ಎನ್.ಎ. ಹ್ಯಾರೀಸ್ ಮತ್ತು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರನ್ನು ಆಹ್ವಾನಿಸಲಾಯಿತು.