ಮಡಿಕೇರಿ, ಮಾ. ೨೦: ಜಿಲ್ಲೆಯಾದ್ಯಂತ ಸಡಗರ ಸಂಭ್ರಮ ದೊಂದಿಗೆ ಶ್ರದ್ಧಾಭಕ್ತಿಯಿಂದ ಯುಗಾದಿ ಹಬ್ಬವನ್ನು ಆಚರಿಸಲಾಯಿತು. ಹಬ್ಬದ ಪ್ರಯುಕ್ತ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಮನೆಗಳಲ್ಲಿ ಬೇವು-ಬೆಲ್ಲವನ್ನು ಸವಿಯುವುದರೊಂದಿಗೆ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು.
ಮಡಿಕೇರಿಯ, ವಿಜಯ ವಿನಾಯಕ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಪೂಜಾ ಕೈಂಕರ್ಯ ನೆರವೇರಿತು.
ಸೋಮವಾರಪೇಟೆ ಭಾಗದಲ್ಲಿ
ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಯುಗಾದಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಮನೆಗಳಲ್ಲಿ ದಿನದ ಅಂಗವಾಗಿ ಬೇವು-ಬೆಲ್ಲ ಸವಿಯಲಾಯಿತು. ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.
ಅರಸಿನಕುಪ್ಪೆ ಸಿದ್ಧಲಿಂಗಪುರದ ಶ್ರೀ ಮಂಜುನಾಥ ಸ್ವಾಮೀ ದೇವಾಲಯದಲ್ಲಿ ಯುಗಾದಿ ಅಂಗವಾಗಿ ವಿಶೇಷ ಪ್ರಾರ್ಥನೆ, ಪೂಜೆಗಳು ನಡೆದವು. ಇದರೊಂದಿಗೆ ಪಟ್ಟಣದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ಜರುಗಿದವು.
ಕ್ರೀಡಾಕೂಟ: ಮಾದಾಪುರದ ಮೂವತೊಕ್ಲುವಿನಲ್ಲಿ ಯುಗಾದಿ ಸಂಭ್ರಮದ ಅಂಗವಾಗಿ ಗ್ರಾಮೀಣ ಕ್ರೀಡಾಕೂಟ ನಡೆಯಿತು. ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಆಬಾಲವೃದ್ಧರಾಗಿ ಎಲ್ಲರೂ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದುದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲರಿಗೂ ಬೇವು-ಬೆಲ್ಲ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಅತಿಥಿಗಳಾಗಿ ಸ್ಥಳೀಯ ಬೆಳೆಗಾರರಾದ ಗಣೇಶ್, ಅಶ್ವಿನಿ ಸ್ವಾತಿ, ಚೀಕಂಡ ತಮ್ಮಯ್ಯ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿಶ್ವ ಕುಂಬೂರು, ಕ್ರೀಡಾ ಸಮಿತಿಯ ಅಧ್ಯಕ್ಷ ಕೊಪ್ಪತಂಡ ಗಣೇಶ್ ಭಾಗಿಯಾಗಿದ್ದರು.
ಗ್ರಾಮಸ್ಥರಿಗೆ ಗುಡ್ಡಗಾಡು ಓಟ, ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆ, ಬಲೂನ್ ಹೊಡೆಯುವ ಸ್ಪರ್ಧೆ, ೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ಗೋಣಿಚೀಲ ಓಟ, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ವಾಲಿಬಾಲ್, ಥ್ರೋಬಾಲ್ ಕ್ರೀಡೆಗಳು ನಡೆಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಶಾಂತಳ್ಳಿಯಲ್ಲಿ: ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯದಲ್ಲಿ ಯುಗಾದಿ ಅಂಗವಾಗಿ ವಿಶೇಷ ಪೂಜೆ ನಡೆಯಿತು. ಇದರೊಂದಿಗೆ ದೇವಾಲಯದ ಮುಂಭಾಗ ನೂತನವಾಗಿ ನಿರ್ಮಿಸಲಾಗಿರುವ ಎರಡು ಆನೆಗಳ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲಾಯಿತು.
ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ಪೂಜೆಗಳು ನಡೆದವು. ಶ್ರೀಕುಮಾರಲಿಂಗೇಶ್ವರ ದೇವರಿಗೆ ಅಲಂಕಾರ, ನೈವೇದ್ಯ, ಮಹಾಮಂಗಳಾರತಿ ಜರುಗಿದವು. ನೂರಾರು ಭಕ್ತಾದಿಗಳು ಪೂಜೋತ್ಸವದಲ್ಲಿ ಭಾಗಿಯಾಗಿದ್ದರು.
ದೇವಾಲಯ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆ.ಎಂ. ಲೋಕೇಶ್, ಮಾಜೀ ಅಧ್ಯಕ್ಷ ಎಸ್.ಜಿ. ಮೇದಪ್ಪ, ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಬಸವರಾಜು, ಪ್ರಮುಖರಾದ ಸುಬ್ಬಯ್ಯ, ಮುತ್ತಣ್ಣ, ಮಧುಕುಮಾರ್, ಮಧು ಸ್ವಾಮಿ, ಉತ್ತಯ್ಯ, ಕೃಷ್ಣಕುಮಾರ್ ಸೇರಿದಂತೆ ಇತರರು ಇದ್ದರು.