ವೀರಾಜಪೇಟೆ, ಮಾ. ೨೨: ಇಲ್ಲಿನ ಬ್ರಾಂದಿ ಅಂಗಡಿಯಲ್ಲಿ ಮಧ್ಯರಾತ್ರಿ ಕನ್ನಹಾಕಿ ಹಣದೋಚಿ ಪರಾರಿಯಾಗಿದ್ದ ಘಟನೆಗೆ ಸಂಬAಧಿಸಿದAತೆ ಚೆಟ್ಟಿಮಾನಿ ಯುವಕನೋರ್ವನನ್ನು ಬಂಧಿಸಲಾಗಿದೆ.

ಚೆಟ್ಟಿಮಾನಿ ಕಾಣಕಂಡಿ ಕಾಲೋನಿ ನಿವಾಸಿ ಪೌತಿ ಅಡಿಯರ ಡಿ. ಕಿರಣ್ ತಮ್ಮಯ್ಯ (೨೦) ಕಳ್ಳತನವೆಸಗಿ ಬಂಧಿತನಾದ ವ್ಯಕ್ತಿ. ವೀರಾಜಪೇಟೆ ನಗರದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿರುವ ಭಾರತ್ ವೈನ್ಸ್ನಲ್ಲಿ ಕೆಲದಿನದಿಂದೆ ರಾತ್ರಿ ಅನಾಮಿಕ ವ್ಯಕ್ತಿಯೋರ್ವ ಮಳಿಗೆಯ ಬೀಗ ಮುರಿದು ಒಳ ಪ್ರವೇಶ ಮಾಡಿದ್ದು ಮಳಿಗೆಯ ಹಣದ ಪೆಟ್ಟಿಗೆಯಲ್ಲಿದ್ದ ಸುಮಾರು ರೂ. ೧೫,೦೦೦ ನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ. ಮರುದಿನ ಬೆಳಿಗ್ಗೆ ಬೀಗ ಮುರಿದಿರುವುದು ಬೆಳಕಿಗೆ ಬಂದಿದೆ. ನಂತರದಲ್ಲಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಬಳಿಕ ಶ್ವಾನ ದಳ, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿದ್ದಾರೆ. ಮಳಿಗೆಯಲ್ಲಿದ್ದ ಸಿ.ಸಿ. ಕ್ಯಾಮರಾದ ದೃಶ್ಯಾವಳಿಗಳನ್ನು ಪರಿಶೀಲನೆಗೆ ಒಳಪಡಿಸಿದ ವೇಳೆ ಕೃತ್ಯ ಬೆಳಕಿಗೆ ಬಂದಿದೆ. ವ್ಯಕ್ತಿಯ ಜಾಡು ಹಿಡಿದ ಪೊಲೀಸರು ತಾ. ೨೦ ರಂದು ಚೆಟ್ಟಿಮಾನಿ ಕಾಣಕಂಡಿ ಕಾಲೋನಿಯಲ್ಲಿ ಆರೋಪಿಯನ್ನು ಬಂದಿಸಿ ತನಿಖೆಗೆ ಒಳಪಡಿಸಿದ್ದಾರೆ. ತನಿಖೆಯ ವೇಳೆ ಆರೋಪಿ ಕಳ್ಳತನವೆಸಗಿರುವುದನ್ನು ತಿಳಿಸಿದ್ದಾನೆ. ಮಳಿಗೆ ವ್ಯವಸ್ಥಾಪಕರು ಮತ್ತು ಮಾಲೀಕರು ನೀಡಿರುವ ದೂರಿನ ಮೇರೆಗೆ ವೀರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಕಿರಣ್ ತಮ್ಮಯ್ಯನ ಮೇಲೆ ಕಳ್ಳತನ ಆರೋಪ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರ ನಿರ್ದೇಶನದ ಮೇರೆಗೆ ವೀರಾಜಪೇಟೆ ಉಪವಿಭಾಗ ಡಿವೈಎಸ್ಪಿ ಮಹೇಶ್ ಕುಮಾರ್ ಎಸ್. ಅವರ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಪಿ., ಠಾಣಾಧಿಕಾರಿ ಪ್ರಮೋದ್ ಮತ್ತು ಅಪರಾಧ ಪತ್ತೆ ವಿಭಾಗದ ಪಿ.ಎಸ್.ಐ. ಕಾವೇರಪ್ಪ ಟಿ.ಎಂ. ಹಾಗೂ ಅಪರಾಧ ಪತ್ತೆ ಕರ್ತವ್ಯ ನಿರತ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.