ಗೋಣಿಕೊಪ್ಪಲು, ಮಾ. ೨೧: ಉತ್ತಮ ಮಳೆಗಾಗಿ ಮಾಯಮುಡಿ ಕಮಟೆ ಮಹಾದೇವನ ದೇವಾಲಯದಲ್ಲಿ ವಿಶೇಷ ಪೂಜೆಯೊಂದಿಗೆ ಪ್ರಾರ್ಥಿಸಲಾಯಿತು.
ಸುತ್ತಮುತ್ತಲಿನ ಗ್ರಾಮಗಳಿಗೆ ಕೊಂಚಮಟ್ಟಿಗೆ ಮಳೆಯಾದರೂ ಮಾಯಮುಡಿ ಭಾಗದಲ್ಲಿ ಮಳೆಯಾಗದ ಆಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ದೇವರಲ್ಲಿ ಪ್ರಾರ್ಥಿಸಿದರು. ಯುಗಾದಿ ಹಬ್ಬದ ಅಂಗವಾಗಿ ಕಮಟೆ ಮಹಾದೇವರ ದೇವಾಲಯದಲ್ಲಿ ರುದ್ರಾಭಿಷೇಕ ಪೂಜೆಯನ್ನು ಏರ್ಪಡಿಸಲಾಗಿತ್ತು. ಸುತ್ತಮುತ್ತಲಿನ ಗ್ರಾಮದ ಭಕ್ತರು ದೇವಾಲಯಕ್ಕೆ ಆಗಮಿಸಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು. ಯುಗಾದಿ ಹಬ್ಬದ ಅಂಗವಾಗಿ ಗರ್ಭಗುಡಿಯನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು.
ದೇವಾಲಯ ಸಮಿತಿಯ ಅಧ್ಯಕ್ಷ ಸಣ್ಣುವಂಡ ರಮೇಶ್, ದೇವಾಲಯ ಆಡಳಿತ ಮಂಡಳಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಯುಗಾದಿ ಹಬ್ಬದ ಅಂಗವಾಗಿ ದೇವಾಲಯದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.