ವೀರಾಜಪೇಟೆ, ಮಾ. ೨೧: ವೀರಾಜಪೇಟೆಯ ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜ ಹಾಗೂ ದಾನಿಗಳ ಸಹಕಾರದಲ್ಲಿ ವೀರಾಜಪೇಟೆಯ ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಸ್ಥಾನಕ್ಕೆ ರೂ. ೧.೨೦ ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ ಅನ್ನ ಶೇಖರಣಾ ಮಂಚವನ್ನು ನೀಡಲಾಯಿತು.

ದೇವಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಜಿ. ಸುಮೇಶ್ ಅವರು ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಸ್ಥಾನದ ಅಧ್ಯಕ್ಷ ಟಿ.ಕೆ. ರಾಜನ್ ಅವರಿಗೆ ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಶ್ರೀ ಮುತ್ತಪ್ಪನ್ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಜಿ. ಸುಮೇಶ್ ಅವರು, ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಸ್ಥಾನದಲ್ಲಿ ವರ್ಷಂಪ್ರತಿ ಮುತ್ತಪ್ಪ ತೆರೆ ಮಹೋತ್ಸವ ಸೇರಿದಂತೆ ಹಲವಾರು ಕಾರ್ಯಕ್ರಮಗಳು ನಡೆಯುತ್ತಲಿರುತ್ತದೆ. ಮುತ್ತಪ್ಪ ತೆರೆ ಮಹೋತ್ಸವ ಮೂರು ದಿನಗಳ ಕಾಲ ನಡೆಯುತ್ತದೆ. ಇಂತಹ ಸಂದರ್ಭದಲ್ಲಿ ಸುಮಾರು ೮-೧೦ ಕ್ವಿಂಟಾಲ್ ರಷ್ಟು ಅನ್ನ ಪ್ರಸಾದ ತಯಾರಿಸಬೇಕಾಗುತ್ತದೆ. ಈ ವೇಳೆ ಅನ್ನ ಬಸಿಯುವುದು ಸೇರಿದಂತೆ ಶೇಖರಣೆ ಮಾಡಲು ಅನುಕೂಲವಾಗುವಂತೆ ಗುಣಮಟ್ಟದ ಸ್ಟೀಲ್‌ನಲ್ಲಿ ಅನ್ನ ಶೇಖರಣಾ ಮಂಚವನ್ನು ತಯಾರಿಸಿ ದೇವಸ್ಥಾನಕ್ಕೆ ಹಸ್ತಾಂತರಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಸದಸ್ಯರುಗಳು ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಸ್ಥಾನದ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.