ವೀರಾಜಪೇಟೆ, ಮಾ. ೨೨: ಅಕ್ರಮವಾಗಿ ಅಂತರ್ ರಾಜ್ಯಕ್ಕೆ ಗಾಂಜಾ ಸಾಗಾಟ ಮಾಡಲು ಯತ್ನಿಸುತಿದ್ದ ವ್ಯಕ್ತಿಗಳನ್ನು ವೀರಾಜಪೇಟೆ ನಗರ ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಜಿಲ್ಲೆ ಹುಣಸೂರು ತಾಲೂಕು ಹಣಗೋಡು ಹಿಜ್ಜೂರು ನಿವಾಸಿ ಮಧು ಮಾದೇವ (೫೩) ಮತ್ತು ಕೊಳವಿಗೆ ಗ್ರಾಮದ ನಿವಾಸಿ ಶಶಿಕುಮಾರ್ (೨೪) ಗಾಂಜಾ ಮಾರಾಟ ಮಾಡಲು ಯತ್ನಿಸಿ ಬಂಧಿತರಾದ ವ್ಯಕ್ತಿಗಳು.

ಬಂಧಿತ ಆರೋಪಿ ಮಧು ಮಾದೇವ ತಾನು ಹೊಂದಿರುವ ಮಾರುತಿ ಸ್ವಿಫ್ಟ್ ಏಐ-೦೪W-೬೨೮೮ ಕಾರಿನಲ್ಲಿ ಗೋಣಿಕೊಪ್ಪ ಪೆರುಂಬಾಡಿ ಮಾರ್ಗವಾಗಿ ಕೇರಳ ರಾಜ್ಯಕ್ಕೆ ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದ. ಗಾಂಜಾ ಮಾರಾಟ ಮಾಡಲು ಶಶಿಕುಮಾರ್ ಎಂಬಾತನನ್ನು ಬಳಸಿಕೊಂಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ವೀರಾಜಪೇಟೆ - ಪೆರುಂಬಾಡಿ ಪೊಲೀಸ್ ತಪಾಸಣೆ ಕೇಂದ್ರದ ಬಳಿ ಕಾರನ್ನು ತಪಾಸಣೆ ಮಾಡುವ ವೇಳೆ ವಾಹನದಲ್ಲಿ ಸುಮಾರು ೨೫೦ ಗ್ರಾಂ ಗಾಂಜಾ ಪತ್ತೆಯಾಗಿದ್ದು, ಪೊಲೀಸರು ಮಧು ಮತ್ತು ಶಶಿಕುಮಾರ್‌ನನ್ನು ಗಾಂಜಾ ಸಹಿತ ವಶಕ್ಕೆ ಪಡೆದಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ನಿರ್ದೇಶನದ ಮೇರೆಗೆ ವೀರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್ ಎಸ್. ಮಾರ್ಗದರ್ಶನದಲ್ಲಿ ವೃತ್ತ ನೀರಿಕ್ಷಕ ಅನೂಪ್ ಮಾದಪ್ಪ ಪಿ., ಠಾಣಾಧಿಕಾರಿ ಪ್ರಮೋದ್ ಮತ್ತು ಅಪರಾಧ ಪತ್ತೆ ವಿಭಾಗ ಪಿ.ಎಸ್.ಐ. ಕಾವೇರಪ್ಪ ಟಿ.ಎಂ. ಹಾಗೂ ಅಪರಾಧ ಪತ್ತೆ ಕರ್ತವ್ಯ ನಿರತ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

- ಕಿಶೋರ್ ಕುಮಾರ್ ಶೆಟ್ಟಿ