ಸೋಮವಾರಪೇಟೆ, ಮಾ. ೨೨: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರವಾಸೋದ್ಯಮ ಇಲಾಖೆ ಹಾಗೂ ಪ್ರವಾಸೋದ್ಯಮ ಪಾಲುದಾರರ ವತಿಯಿಂದ ಎರಡನೇ ಸ್ವಚ್ಛತಾ ಕಾರ್ಯಕ್ರಮ ‘ಸ್ವಚ್ಛ ಕೊಡಗು-ಸುಂದರ ಕೊಡಗು’ ಅಭಿಯಾನ ಹೊನ್ನಮ್ಮನ ಕೆರೆ ಪ್ರದೇಶದಲ್ಲಿ ನಡೆಯಿತು.

ಸೋಮವಾರಪೇಟೆ ಹೋಂ ಸ್ಟೇ ಮತ್ತು ಟೂರಿಸಂ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಅಭಿಯಾನವನ್ನು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪರಮೇಶ್‌ಕುಮಾರ್ ಉದ್ಘಾಟಿಸಿ ಮಾತನಾಡಿ, ಸ್ವಚ್ಛತಾ ಅಭಿಯಾನ ನಿರಂತರವಾಗಿ ನಡೆಯಬೇಕು ಮತ್ತು ನಾಗರಿಕರಲ್ಲಿ ಸ್ವಚ್ಛತೆಯ ಬಗ್ಗೆ ಪ್ರಜ್ಞೆ ಮೂಡಿಸಬೇಕು ಎಂದರು. ಹೋಂ ಸ್ಟೇ ಅಸೋಸಿಯೇಷನ್ ಅಧ್ಯಕ್ಷ ಸಿ.ಕೆ. ರೋಹಿತ್ ಮಾತನಾಡಿ, ಈ ಹಿಂದಿನಿAದಲೂ ಅಸೋಸಿಯೇಷನ್ ವತಿಯಿಂದ ಹಲವಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು.

ಅಭಿಯಾನದಲ್ಲಿ ಹೊನ್ನಮ್ಮನ ಕೆರೆ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಚಂದ್ರಶೇಖರ್, ಕಾರ್ಯದರ್ಶಿ ಪ್ರದೀಪ್, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೋಹನ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪ್ರಮೀಳ, ಹೋಂ ಸ್ಟೇ ಅಸೋಸಿಯೇಷನ್ ಉಪಾಧ್ಯಕ್ಷ ಯೋಗೇಶ್ ಪಟೇಲ್, ಕಾರ್ಯದರ್ಶಿ ಅಭಿನಂದನ್ ಸೇರಿದಂತೆ ಸದಸ್ಯರುಗಳು ಭಾಗವಹಿಸಿದ್ದರು.