ಕಣಿವೆ, ಮಾ. ೨೨: ಆಹಾರ ಅರಸಿ ಅಡ್ಡಾಡುತ್ತಿದ್ದ ಒಂಟಿ ಸಲಗ ಹೆದ್ದಾರಿಯಲ್ಲಿ ಪ್ರತ್ಯಕ್ಷಗೊಳ್ಳುವ ಮೂಲಕ ಸ್ಥಳೀಯರಲ್ಲಿ ಆತಂಕ ಮೂಡಿಸಿದ ಘಟನೆ ಕೊಡ್ಲಿಪೇಟೆ ಬಳಿಯ ನಿಲುವಾಗಿಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೃಷಿಕ ಮದನ್, ಧರ್ಮಪ್ಪ ಎಂಬವರು ಹೆದ್ದಾರಿಯಲ್ಲಿ ತೆರಳುತ್ತಿದ್ದ ವೇಳೆ ಬೆಳಿಗ್ಗೆ ೭ ಗಂಟೆ ಸುಮಾರಿಗೆ ದೈತ್ಯ ಸಲಗ ಕಟ್ಟೇಪುರ ಅರಣ್ಯ ಭಾಗದಿಂದ ಹೆದ್ದಾರಿಯತ್ತ ಬಂದು, ಬಳಿಕ ಸ್ವಲ್ಪ ದೂರ ಹೆದ್ದಾರಿಯಲ್ಲಿಯೇ ಸಾಗಿ ಬಳಿಕ ಕಾಡಿನತ್ತ ತೆರಳಿದೆ. ಕಾಡಂಚಿನ ಬೆಳೆಗಾರರು ತೋಟಗಳಲ್ಲಿ, ಹೊಲ ಗದ್ದೆಗಳಲ್ಲಿ ಬೆಳೆದ ಕೃಷಿ ಫಸಲು ಹಾಗೂ ತೋಟಗಾರಿಕಾ ಬೆಳೆಗಳನ್ನು ಕಾಡಾನೆಗಳು ತಿಂದು ತುಳಿದು ನಾಶಪಡಿಸುತ್ತಿವೆ. ಬೆಳೆ ನಷ್ಟಕ್ಕೊಳಗಾದ ಕೃಷಿಕರು ಪರಿಹಾರಕ್ಕೆ ಅರಣ್ಯ ಇಲಾಖೆಗೆ ಅಲೆದು ಅಲೆದು ಬೇಸತ್ತಿದ್ದೇವೆ. ಸಕಾಲದಲ್ಲಿ ಸೂಕ್ತ ಪರಿಹಾರದ ಹಣ ಬರುವುದಿಲ್ಲ. ಹತ್ತು ಸಾವಿರ ಮೌಲ್ಯದ ಕೃಷಿ ಫಸಲು ಕಾಡಾನೆಗಳ ಧಾಳಿಯಿಂದ ಹಾನಿಯಾದರೆ ಅರಣ್ಯ ಇಲಾಖೆ ಕೇವಲ ಸಾವಿರ ರೂಗಳ ಚೆಕ್ ನೀಡುತ್ತಿದೆ ಎಂದು ನಿಲುವಾಗಿಲು ಗ್ರಾಮದ ಕೃಷಿಕ ಧರ್ಮಪ್ಪ ಬೇಸರ ವ್ಯಕ್ತಪಡಿಸುತ್ತಾರೆ. ಕೂಡಲೇ ಕ್ಷೇತ್ರದ ಶಾಸಕ ಡಾ.ಮಂತರಗೌಡರು ಗ್ರಾಮದತ್ತ ಬಂದು ಇಲ್ಲಿನ ಕಾಡಂಚಿನ ಕೃಷಿಕರ ಗೋಳನ್ನು ಆಲಿಸಬೇಕು. ಇಲಾಖೆಗಳಿಂದ ಸಿಗಬೇಕಾದ ಪರಿಹಾರ ಧನ ಹಾಗೂ ಸೂಕ್ತ ಸೌಲಭ್ಯಗಳನ್ನು ಒದಗಿಸಲು ಕ್ರಮಕೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.