ಮಡಿಕೇರಿ, ಮಾ. ೨೩; ಕೇಂದ್ರ ಸರಕಾರ ಅಡುಗೆ ಹಾಗೂ ವಾಣಿಜ್ಯ ಬಳಕೆಯ ಅನಿಲ ದರ ಹೆಚ್ಚಳ ಮಾಡಿರುವದನ್ನು ವಿರೋಧಿಸಿ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಗಣಪತಿ ಬೀದಿಯಲ್ಲಿರುವ ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ಮೂಲಕ ಸಾಗಿದ ಕಾಂಗ್ರೆಸ್ ಕಾರ್ಯಕರ್ತರು ಮುಖ್ಯ ಬೀದಿಯಲ್ಲಿ ಸಾಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಬಳಿ ನಡೆದ ಪ್ರತಿಭಟನೆ ಸಂದರ್ಭ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಮಾಧ್ಯಮ ಸಂವಹನ ವಕ್ತಾರ ಟಿ.ಪಿ ರಮೇಶ್; ಹಿಂದೆ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರಕಾರ ಆಡಳಿತದಲ್ಲಿದ್ದಾಗ ಅನಿಲ ದರ ರೂ.೪೧೩ ಇದ್ದ ಸಂದರ್ಭದಲ್ಲಿ ಬಿಜೆಪಿಯವರು ತಲೆಯ ಮೇಲೆ ಸಿಲಿಂಡರ್ ಹೊತ್ತುಕೊಂಡು ಪ್ರತಿಭಟನೆ ಮಾಡಿದ್ದರು. ಇದೀಗ ಬೆಲೆ ಒಂದು ಸಾವಿರ ದಾಟಿದ್ದರೂ ಸುಮ್ಮನಿದ್ದಾರೆ. ಜಿಲ್ಲಾಡಳಿತ, ರಾಜ್ಯ ಸರಕಾರದ ಮೂಲಕ ಕೇಂದ್ರ ಸರಕಾರಕ್ಕೆ ಮಾಹಿತಿ ನೀಡಬೇಕಿದೆ ಎಂದು ಹೇಳಿದರು.

ನಗರಸಭಾ ಸದಸ್ಯ, ಮೂಡ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಮಾತನಾಡಿ; ಕೇಂದ್ರ ಸರಕಾರ ಅನಿಲ ದರವನ್ನು ೧೦೦೦ಕ್ಕೆ ಏರಿಸಿದ್ದು ಬಡ ಕಾರ್ಮಿಕರಿಗೆ ದುಬಾರಿ ಹಣ ತೆತ್ತು ಅನಿಲ ಖರೀದಿಸಿ ಆಹಾರ ಸೇವನೆ ಮಾಡಲು ಕಷ್ಟವಾಗುತ್ತಿದೆ. ಯುದ್ಧದ ಸಂದರ್ಭದಲ್ಲಿ ಇಂತಹ ದೊಡ್ಡ ಸಮಸ್ಯೆ ತಂದೊಡ್ಡಿದ್ದು, ಇದಕ್ಕೆ ಕೇಂದ್ರ ಸರಕಾರವೇ ಹೊಣೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನೀರ ಮೈನಾ ಮಾತನಾಡಿ; ಯುದ್ಧದ ಕಾರಣ ಮುಂದಿಟ್ಟುಕೊAಡು ಕೇಂದ್ರ ಸರಕಾರ ಏಕಾಏಕಿ ಅನಿಲ ದರ ಹೆಚ್ಚಳ ಮಾಡಿದೆ. ೨೦೦೩ರಲ್ಲಿ ಇದೇ ರೀತಿ ಪರಿಸ್ಥಿತಿ ಉಂಟಾಗಿದ್ದಾಗ ಅಂದಿನ ಯುಪಿಎ ಸರಕಾರ ಆಡಳಿತಾತ್ಮಕವಾಗಿ ಬಗೆಹರಿಸಿತ್ತು. ಆದರೆ ಈಗಿನ ಕೇಂದ್ರ ಸರಕಾರ ಬೆಲೆ ಹೆಚ್ಚಳದ ಮೂಲಕ ನೇರವಾಗಿ ದೇಶದ ಜನತೆಯ ಮೇಲೆ ಹೊರೆ ಹೇರುತ್ತಿದೆ ಎಂದು ದೂರಿದರು.

ಬಳಿಕ ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಅವರ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್‌ರಾಜ್, ಕೋಚನ ಚೇತನ್, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಶಿಕಲ, ನಗರಸಭಾ ಸದಸ್ಯರುಗಳಾದ ಜಗದೀಶ್, ಸದಾ ಮುದ್ದಪ್ಪ, ಜುಲೆಕಾಬಿ, ಮೂಡ ಸದಸ್ಯೆ ಮಿನಾಜ್ ಪ್ರವೀಣ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯೆ ಹೊಟ್ಟೇಂಗಡ ಫ್ಯಾನ್ಸಿ ಬೆಳ್ಯಪ್ಪ, ಪ್ರಮುಖರುಗಳಾದ ನವೀನ್ ಅಂಬೆಕಲ್, ಕಾನೆಹಿತ್ಲು ಮೊಣ್ಣಪ್ಪ, ಟಿ.ಹೆಚ್.ಉದಯಕುಮಾರ್, ದಿನೇಶ್ ಶೆಟ್ಟಿ, ಯಾಕುಬ್, ಜಾನ್ಸನ್ ಪಿಂಟೋ, ಅರ್ಜುನ್ ಸೂರ್ಯ, ಮುನೀರ್ ಮಾಚಾರ್, ಇಮ್ರಾನ್, ಕೆ.ಜಿ.ಪೀಟರ್, ಆರ್.ಪಿ.ಚಂದ್ರಶೇಖರ್, ಸುದಯ್ ನಾಣಯ್ಯ, ಶ್ರೀಮತಿ ಬಂಗೇರ ಮುಂತಾದವರು ಇದ್ದರು.