ಶನಿವಾರಸಂತೆ, ಮಾ.೨೩: ಇಂದು ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಶಾಸಕ ಡಾ.ಮಂತರ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಸಮೀಪದ ಮಾಲಂಬಿ ಗ್ರಾಮದಲ್ಲಿ ಮಾಲಂಬಿ ಬ್ರದರ್ಸ್ ವತಿಯಿಂದ ಸೋಮವಾರಪೇಟೆ - ಕುಶಾಲನಗರ ತಾಲೂಕು ಹಾಗೂ ಹಾಸನ ಜಿಲ್ಲೆಯ ಮರಿಯ ನಗರ ಮತ್ತು ಅರಗಲ್ಲು ತಂಡಗಳಿಗೆ ಹಮ್ಮಿಕೊಳ್ಳಲಾಗಿದ್ದ ವಾಲಿಬಾಲ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ವಾಲಿಬಾಲ್‌ನಂತಹ ಕ್ರೀಡಾಕೂಟ ಹಮ್ಮಿಕೊಂಡಿರುವುದು ಶ್ಲಾಘನೀಯ, ಕ್ರೀಡೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ. ಸಮಗ್ರ ಶಿಕ್ಷಣ ಅಭಿವೃದ್ಧಿಯಲ್ಲಿ ಕ್ರೀಡಾ ಶಿಕ್ಷಣವೂ ಯಶಸ್ಸು ಸಾಧಿಸುತ್ತಿದ್ದು, ಭವಿಷ್ಯದಲ್ಲಿ ಕ್ರೀಡಾ ಕ್ಷೇತ್ರ ಅಭಿವೃದ್ಧಿಯಾಗುತ್ತದೆ. ಸರ್ಕಾರ ಕ್ರೀಡಾಕೂಟಗಳಿಗೆ ಪ್ರೋತ್ಸಾಹಧನ ನೀಡುತ್ತಿದೆ. ಪೋಷಕರು ಮಕ್ಕಳ ಕ್ರೀಡಾ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕು. ಗ್ರಾಮೀಣ ಕ್ರೀಡಾಪಟುಗಳು ರಾಷ್ಟç-ಅಂತರರಾಷ್ಟಿçÃಯ ಮಟ್ಟದಲ್ಲೂ ಸಾಧನೆ ಮೂಲಕ ಗುರುತಿಸಿಕೊಂಡಿದ್ದಾರೆ ಎಂದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ವಿ ಅಶೋಕ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇಂತಹ ಕ್ರೀಡಾಕೂಟ ಆಯೋಜನೆ ಮಾಡುವುದು ಸಾಹಸದ ಕೆಲಸ. ಗ್ರಾಮದ ಯುವ ಸಮೂಹ ಇತರರ ಸಹಕಾರದಿಂದ ಕ್ರೀಡಾಕೂಟ ಏರ್ಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ಕ್ರೀಡಾಕೂಟ ನಡೆಯುವಂತಾಗಲಿ ಎಂದು ಹಾರೈಸಿದರು.

ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯೆ ರಾಜಮ್ಮ ರುದ್ರಯ್ಯ, ಆಲೂರುಸಿದ್ದಾಪುರ ಪ್ರಾ.ಕೃ.ಪ.ಸಹಕಾರ ಸಂಘದ ಅಧ್ಯಕ್ಷ ಪ್ರಸನ್ನಕುಮಾರ್, ಪ್ರಮುಖರಾದ ಎಂ.ಡಿ ಸುರೇಶ್, ಕೊಮಾರಪ್ಪ, ಮುತ್ತಮ್ಮ, ಲಿಂಗರಾಜ್, ಲೀಲಾದಾಸ್, ತೀರ್ಥಪ್ರಸಾದ್, ಪ್ರಸನ್ನ, ಮಾಲಂಬಿ ಬ್ರದರ್ಸ್ ಸಮಿತಿ ಅಧ್ಯಕ್ಷ ಸಿದ್ದಾಪ್ಪಾಜಿ, ಸುಂದರ್, ಮುತ್ತಪ್ಪ, ಉಣ್ಣಿಕೃಷ್ಣ, ಸುಬ್ರಹ್ಮಣ್ಯ, ಚೆನ್ನಕೇಶವ ಇತರರು ಹಾಜರಿದ್ದರು.

ವಾಲಿಬಾಲ್ ಕ್ರೀಡಾಕೂಟದಲ್ಲಿ ಕೂಡುಮಂಗಳೂರು ಬಿ.ವೈ.ಸಿ ತಂಡ ಪ್ರಥಮ ಬಹುಮಾನ, ಹೆಬ್ಬಾಲೆ ಟೀಮ್ ಲಾಲಿ ತಂಡ ದ್ವಿತೀಯ ಬಹುಮಾನ, ಶನಿವಾರಸಂತೆ ಫ್ರೆಂಡ್ಸ್ ತಂಡ ತೃತೀಯ ಬಹುಮಾನ ಹಾಗೂ ಮಾಲಂಬಿ ಬ್ರದರ್ಸ್ ತಂಡ ಚತುರ್ಥ ಬಹುಮಾನ ಪಡೆದುಕೊಂಡರು.