ಹೆಬ್ಬಾಲೆ ಮಾ.೨೩ : ಸಮೀಪದ ಹನುಮಂತಪುರ (ಸೂಳೆಕೋಟೆ) ಗ್ರಾಮದ ಪವಿತ್ರ ಕಾವೇರಿ ನದಿ ದಂಡೆ ಮೇಲಿರುವ ಇತಿಹಾಸ ಪ್ರಸಿದ್ಧ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ವಾರ್ಷಿಕ ಬ್ರಹ್ಮ ರಥೋತ್ಸವ ಶನಿವಾರ ಶ್ರದ್ಧಾಭಕ್ತಿಯೊಂದಿಗೆ ನಡೆಯಿತು.
ಶ್ರೀ ಆಂಜನೇಯ ಸ್ವಾಮಿ ದೇವಾಲಯ ಹಾಗೂ ಸಹೋದರಿ ದೇವಸ್ಥಾನ ಶ್ರೀ ದಂಡಿನಮ್ಮ ದೇವಾಲಯದಲ್ಲಿ ವಿಶೇಷ ಪೂಜಾಮಹೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಜರುಗಿತು.
ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯು ಜರುಗಿದ ವಾರ್ಷಿಕ ಬ್ರಹ್ಮ ರಥೋತ್ಸವದಲ್ಲಿ ನೂರಾರು ಭಕ್ತರು ಭಾಗಿಯಾಗಿ ತೇರನ್ನು ದೇವಸ್ಥಾನ ಬಳಿಯಿಂದ ಕಾವೇರಿ ನದಿ ದಂಡೆವರೆಗೆ ಎಳೆಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು. ಪುಷ್ಪ ಹಾಗೂ ವಿವಿಧ ಧ್ವಜಗಳಿಂದ ಅಲಂಕೃತ ಗೊಂಡಿದ್ದ ತೇರಿನಲ್ಲಿ ರಾಮ,ಲಕ್ಷ್ಮಣ,ಸೀತೆ ಹಾಗೂ ಆಂಜನೇಯಸ್ವಾಮಿ ದೇವರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು. ಬೆಟ್ಟದಪುರ ಕನ್ನಡ ಮಠದ ಶ್ರೀ ಚಿಕ್ಕವೀರದೇಶಿಕೇಂದ್ರ ಸ್ವಾಮೀಜಿ ಅಲಂಕೃತ ರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ಮಧ್ಯಾಹ್ನ ೧೨ ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಇದಕ್ಕೂ ಮೊದಲು ದೇವಾಲಯದ ಆವರಣದಲ್ಲಿ ಸೀತಾರಾಘವಕಲ್ಯಾಣೋತ್ಸವ ನಡೆಯಿತು. ನಂತರ ಇದೇ ಪ್ರಥಮ ಬಾರಿಗೆ ದೇವಾಲಯ ಸಮಿತಿ ಅಧ್ಯಕ್ಷ ಹೆಚ್.ಶಿಂಗ್ರಿಶೆಟ್ಟಿ ಅವರು ರೂ.೩ ಲಕ್ಷ ಸ್ವಂತ ಹಣದಿಂದ ಶಿಲ್ಪಿ ಪ್ರವೀಣ್ ಅವರ ಮೂಲಕ ಚಿಕ್ಕ ಹೊಸ ರಥ ನಿರ್ಮಿಸಿಕೊಟ್ಟಿದ್ದು,ಈ ರಥದಲ್ಲಿ ರಾಮ,ಲಕ್ಷ್ಮಣ,ಸೀತೆ ಹಾಗೂ ಆಂಜನೇಯ ಸ್ವಾಮಿ ವಿಗ್ರಹ ಪ್ರತಿಷ್ಠಾಪಿಸಿ ಮಂಗಳವಾದ್ಯಗಳೊAದಿಗೆ ದೇವಾಲಯದ ಆವರಣದಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ರಾಮ,ಲಕ್ಷ್ಮಣ,ಸೀತೆ ಹಾಗೂ ಆಂಜನೇಯ ಸ್ವಾಮಿ ವಿಗ್ರಹವನ್ನು ದೊಡ್ಡ ರಥದಲ್ಲಿ ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥೋತ್ಸವ ಅಂಗವಾಗಿ ಆಂಜನೇಯ ಸ್ವಾಮಿ ವಿಗ್ರಹಕ್ಕೆ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗಿತ್ತು. ದೇವಾಲಯವನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಹಾಗೂ ಹಸಿರು ತೋರಣಗಳಿಂದ ಶೃಂಗಾರ ಮಾಡಲಾಗಿತ್ತು.ದೇವಾಲಯ ಅರ್ಚಕರು ವೆಂಕಟಸ್ವಾಮಿ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು.ವೀರಭದ್ರೇಶ್ವರ ವೀರಗಾಸೆ ಕುಣಿತ ರಥೋತ್ಸವಕ್ಕೆ ಮೆರುಗು ನೀಡಿತು. ಮೆರವಣಿಗೆಯುದ್ದಕ್ಕೂ ರಥಕ್ಕೆ ಈಡುಗಾಯಿಯೊಂದಿಗೆ ಹೂ, ಬಾಳೆಹಣ್ಣನ್ನು ಎಸೆದು ಭಕ್ತಿ ಮೆರೆದರು.ರಥೋತ್ಸವದಲ್ಲಿ ಮೈಸೂರು,ಹಾಸನ,ಕೊಡಗು ಜಿಲ್ಲೆಗಳ ಗಡಿಗ್ರಾಮದ ಜನರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಜನರು ಪಾಲ್ಗೊಂಡಿದ್ದರು.
ದೇವಾಲಯ ಆವರಣದಲ್ಲಿ ಸೇರಿದ್ದ ಜಾತ್ರೆ ಗ್ರಾಮೀಣ ಸಂಸ್ಕೃತಿಯನ್ನು ಪ್ರತಿಬಿಂಬಿಸಿತು.ಮಹಿಳೆಯರು ಬೆಳೆಗಳನ್ನು ತೊಡಿಸಿಕೊಂಡು ಸಂಭ್ರಮಿಸಿದರು. ರಥೋತ್ಸವಕ್ಕೆ ಆಗಮಿಸಿದ್ದ ಅಪಾರ ಭಕ್ತರು ಸರದಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು. ದೇವಾಲಯ ಸಮಿತಿ ಹಾಗೂ ದಾನಿಗಳ ಸಹಕಾರದಿಂದ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು. ಈ ಸಂದರ್ಭಆAಜನೇಯ ಸ್ವಾಮಿ ದೇವಾಲಯ ಸೇವಾ ಸಮಿತಿ ಅಧ್ಯಕ್ಷ ಹೆಚ್.ಶಿಂಗ್ರಿಶೆಟ್ಟಿ, ಸಮಿತಿ ಕಾರ್ಯಾಧ್ಯಕ್ಷ ಎಸ್.ಎಸ್. ಶಂಕರಪ್ಪ, ಕಾರ್ಯದರ್ಶಿ ಎಂ.ಕೆ. ಶಿವರಾಮ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತೀಶ್ ವೆಂಕಟೇಶ್, ಮುಖಂಡರಾದ ಎಸ್.ಎಸ್.ಮೋಹನ್ ರಾಜ್, ಹೆಚ್.ಎಸ್.ಮಂಜುನಾಥ್, ಎಸ್.ಕೆ.ವಿಶ್ವನಾಥ್, ಎಸ್.ಎಸ್.ಶಂಕರಪ್ಪ, ಗೋವಿಂದರಾಜು, ರಾಮಚಂದ್ರ ಮತ್ತಿತರರು ಪಾಲ್ಗೊಂಡಿದ್ದರು.