ಕೂಡಿಗೆ, ಮಾ.೨೩: ಹಾರಂಗಿ-ಐಗೂರು ಮಾರ್ಗವಾಗಿ ಸೋಮವಾರಪೇಟೆ ಸಂಪರ್ಕ ರಸ್ತೆಯ ಕಿರು ಸೇತುವೆಯ ಕಾಮಗಾರಿಯು ಶೇಕಡ ೯೫ ರಷ್ಟು ಪೂರ್ಣಗೊಂಡು ಒಂದು ವರ್ಷ ಕಳೆದಿದ್ದು, ಹೆಚ್ಚಿನ ಪ್ರಗತಿಯಾಗದೆ ಸಾರ್ವಜನಿಕರಿಗೆ ಬಳಸಲು ಅಸಾಧ್ಯವಾಗಿದೆ.
೨೦೧೮ರಲ್ಲಿ ಅಧಿಕ ಮಳೆಯಿಂದಾಗಿ ಬೆಟ್ಟದ ನೀರು ನುಗ್ಗಿ ಹಳೆ ಕಿರು ಸೇತುವೆ ಕೊಚ್ಚಿಹೋಗಿತ್ತು. ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ೪ ಗ್ರಾಮಗಳ ಗ್ರಾಮಸ್ಥರ ಬೇಡಿಕೆಗೆ ಅನುಗುಣವಾಗಿ ರೂ.೪೦ ಲಕ್ಷ ವೆಚ್ಚ ಅನುದಾನ ಒದಗಿಸಿದ್ದು, ಕಾಮಗಾರಿಯು ನಡೆದಿದೆ. ಈ ಮಾರ್ಗ ನೂರಾರು ಪರಿಶಿಷ್ಟ ಕುಟುಂಬಗಳ ತಿರುಗಾಟದ ರಸ್ತೆಯೂ ಆಗಿದೆ. ಹಾರಂಗಿ, ಯಡವನಾಡು ಮತ್ತು ಐಗೂರು ಗ್ರಾಮಗಳ ಪ್ರಮುಖ ಸಂಪರ್ಕ ರಸ್ತೆಯ ಸೇತುವೆಯಾಗಿರುವ ಈ ಸೇತುವೆಯ ಕಾಮಗಾರಿಯು ಮುಕ್ತಾಯದ ಹಂತದಲ್ಲಿದ್ದರೂ ಸಹ ಸಾರ್ವಜನಿಕರ, ಗ್ರಾಮಸ್ಥರ ತಿರುಗಾಟಕ್ಕೆ ಅನುವು ಮಾಡದೆ, ಗ್ರಾಮಸ್ಥರು ಸಂಪರ್ಕ ರಸ್ತೆಗೆ ತೆರಳಲು ೪ ಕಿಲೋಮೀಟರ್ ಸುತ್ತಿ ಬಳಸುವ ಅನಿವಾರ್ಯವಿದೆ.
ಕಿರುಸೇತುವೆ ಕಾಮಗಾರಿ ಎಲ್ಲಾ ಹಂತದಲ್ಲಿ ಪೂರ್ಣಗೊಂಡರೂ ಸೇತುವೆಯ ಒಂದು ಬದಿಗೆ ಮಣ್ಣನ್ನು ಹಾಕಲಾಗಿದೆ, ಇನ್ನೊಂದು ಬದಿಗೆ ಮಣ್ಣು ಹಾಕದೆ ಬಿಟ್ಟ ಕಾರಣದಿಂದಾಗಿ ತಿರುಗಾಟ ಮಾಡಲು, ವಾಹನಗಳ ಚಾಲನೆ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಿದೆ. ಸಂಬAಧಿಸಿದ ಇಲಾಖೆಯವರು ಮತ್ತು ಗುತ್ತಿಗೆದಾರ ಕಾಮಗಾರಿಯನ್ನು ಸಂಪೂರ್ಣಗೊಳಿಸಿ, ಗ್ರಾಮಸ್ಥರ, ಸಾರ್ವಜನಿಕರ ತಿರುಗಾಟಕ್ಕೆ ಅನುಕೂಲ ಕಲ್ಪಿಸಬೇಕೆಂದು ಈ ವ್ಯಾಪ್ತಿಯ ಗ್ರಾಮಸ್ಥರ ಒತ್ತಾಯವಾಗಿದೆ.
ಕೆ. ಕೆ. ನಾಗರಾಜಶೆಟ್ಟಿ.