ಮಡಿಕೇರಿ, ಮಾ. ೨೩: ಕೆಪಿಎಸ್-ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ ಕೂಡುಮಂಗಳೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಿ ಕೂಡಿಗೆ ಶಾಲೆಗೆ ವಿಲೀನಗೊಳಿಸಲು ಸರಕಾರ ಮುಂದಾಗಿದೆ ಎಂದು ಎಐಡಿಎಸ್ಓ ಸಂಘಟನೆ ನೇತೃತ್ವದಲ್ಲಿ ಗ್ರಾಮಸ್ಥರು, ಪೋಷಕರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಸಂಘಟನೆ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದ ಕೊಪ್ಪ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ ೪೦,೦೦೦ ಸರ್ಕಾರಿ ಶಾಲೆಗಳನ್ನು ರಾಜ್ಯಾದ್ಯಂತ ಮುಚ್ಚಲಾಗುತ್ತಿದೆ. ಅಕ್ಟೋಬರ್ ೧೫ ಹಾಗೂ ಡಿಸೆಂಬರ್ ೩೦ ೨೦೨೫ ರಂದು ರಾಜ್ಯ ಸರ್ಕಾರವು ಬಿಡುಗಡೆ ಮಾಡಿರುವ ಆದೇಶಗಳ ಪ್ರಕಾರ, ರಾಜ್ಯಾದ್ಯಂತ ೫೯೦೦ ಗ್ರಾಮ ಪಂಚಾಯಿತಿಗಳ ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳಾಗಿ ಪರಿವರ್ತಿಸಲು ಸರ್ಕಾರವು ನಿರ್ಧರಿಸಿದೆ. ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಐದು ಕಿಲೋಮೀಟರ್ ವ್ಯಾಪ್ತಿಯ ಉಳಿದ ಎಲ್ಲಾ ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ಇದಾಗಿದೆ. ಈಗಾಗಲೇ ಕಳೆದ ೧೫ ವರ್ಷಗಳಲ್ಲಿ ರಾಜ್ಯ ಸರ್ಕಾರದ ಪ್ರಕಾರ ೧೭ ಲಕ್ಷ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಯೋಜನೆ ಪ್ರಕಾರ ನಮ್ಮ ರಾಜ್ಯದ ಲಕ್ಷಾಂತರ ರೈತ-ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಗ್ರಾಮದ ಪಾಲಕರು, ಹಿರಿಯರು, ಯುವಕರು ಹಾಗೂ ಗ್ರಾಮಸ್ಥರು ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದರು. ಈ ಯೋಜನೆ ರದ್ದುಗೊಳಿಸುವವರೆಗೂ ಶಾಲೆ ಉಳಿಸಲು ಹೋರಾಡುವ ಎಚ್ಚರಿಕೆ ನೀಡಿದರು. ಶಾಲೆ ಉಳಿಸುವ ಹೋರಾಟಕ್ಕಾಗಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ರಚಿಸಲಾಯಿತು. ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕಿ ಸ್ವಾತಿ, ಪದಾಧಿಕಾರಿಗಳಾದ ಪೂರ್ಣಿಮಾ ಪೋಷಕರಾದ ಜ್ಯೋತಿ, ನೇತ್ರಾವತಿ, ಕಾವ್ಯ, ಗೀತಾ, ಶ್ರುತಿ, ಅಂಕಿತ ಹಾಗೂ ಸಂತೋಷ್ ಮುಂತಾದವರು ಭಾಗವಹಿಸಿದ್ದರು.