ಸಿದ್ದಾಪುರ, ಮಾ. ೨೪: ಸಿಜೆ ಬಿಲ್ಡ್ವೇರ್ ಪ್ರಸ್ತುತಿಯಲ್ಲಿ ಐಪಿಎಲ್ ಮಾದರಿಯಲ್ಲಿ ಆಯೋಜಿಸಲಾಗುತ್ತಿರುವ ಕ್ರಿಶ್ಚಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಆವೃತ್ತಿ-೧ರ ಕ್ರಿಕೆಟ್ನ ಆಟಗಾರರ ಹರಾಜು ಪ್ರಕ್ರಿಯೆ ಸಿದ್ದಾಪುರದ ಚರ್ಚ್ ಹಾಲ್ನಲ್ಲಿ ನಡೆಯಿತು.
ಏಪ್ರಿಲ್ ೧೦, ೧೧ ಮತ್ತು ೧೨ ರಂದು ಸಿದ್ದಾಪುರದ ಪ್ರೌಢಶಾಲಾ ಮೈದಾನದಲ್ಲಿ ಪಂದ್ಯಾವಳಿಗಳು ನಡೆಯಲಿದ್ದು, ಕೊಡಗಿನ ರೋಮನ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಯುವಕರಿಗೆ ಕ್ರೀಡಾ ವೇದಿಕೆ ಒದಗಿಸುವ ಉದ್ದೇಶದಿಂದ ಈ ಲೀಗನ್ನು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ವೀರಾಜಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಜಾನ್ಸನ್, ಸಿಪಿಎಲ್ ಮೂಲಕ ಕೊಡಗಿನ ರೋಮನ್ ಕ್ಯಾಥೋಲಿಕ್ ಯುವಕರನ್ನು ಒಗ್ಗೂಡಿಸುವ ಮಹತ್ವದ ಪ್ರಯತ್ನ ನಡೆಯುತ್ತಿದೆ ಎಂದರು.
ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ಜಿಲ್ಲಾ ಆಯುಕ್ತ ಜಿಮ್ಮಿ ಸಿಕ್ವೇರಾ ಮಾತನಾಡಿ, ಈ ಕ್ರಿಕೆಟ್ ಪಂದ್ಯಾಟ ಯುವಕರಲ್ಲಿ ಕ್ರೀಡಾಸ್ಫೂರ್ತಿ ಬೆಳೆಸುವುದರ ಜೊತೆಗೆ ಐಕ್ಯತೆಯನ್ನು ವೃದ್ಧಿಸುವ ವೇದಿಕೆಯಾಗಲಿದೆ ಎಂದರು.
ಜಾನಪದ ಪರಿಷತ್ ವೀರಾಜಪೇಟೆ ತಾಲೂಕು ಅಧ್ಯಕ್ಷ ಟೋಮಿ ತೋಮಸ್, ಕ್ರೀಡೆ ದೈಹಿಕ ಹಾಗೂ ಮಾನಸಿಕ ದೃಢತೆಯನ್ನು ಬೆಳೆಸುತ್ತದೆ ಎಂದರು. ಈ ಸಂದರ್ಭ ಸಿಜೆ ಬಿಲ್ಡ್ವೇರ್ ಮಾಲೀಕ ಪ್ರಿನ್ಸ್, ಟಿ.ಪಿ. ಕನ್ಸ್ಸ್ಟçಕ್ಷನ್ ಹರೀಶ್, ಸಮಾಜ ಸೇವಕ ಸೈಜನ್ ಪೀಟರ್, ವೀರಾಜಪೇಟೆ ರೋಮನ್ ಕ್ಯಾಥೋಲಿಕ್ ಸಂಘದ ಉಪಾಧ್ಯಕ್ಷ ಜೋಶಿ, ಸೇವಾ ಸಂಘದ ಸದಸ್ಯ ಡಾನ್ ಮ್ಯಾಕ್ಸ್, ಟಿ.ಪಿ. ಅನೀಶ್, ಲಿಯೊರೋ ಗೋಲ್ಡ್ ವ್ಯವಸ್ಥಾಪಕ ರೋಬಿನ್, ಅನಿಲ್, ವಿನ್ಸಿ, ರೀಗಲ್ ಸೇರಿದಂತೆ ೧೨ ತಂಡಗಳ ಮಾಲೀಕರು ಹಾಗೂ ಎಸ್.ಜೆ.ಸಿ ತಂಡದ ಸದಸ್ಯರು ಹಾಜರಿದ್ದರು.