ನಾಪೋಕ್ಲು, ಮಾ. ೨೪: ದ್ವಿಚಕ್ರ ವಾಹನಕ್ಕೆ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಚೆಯ್ಯಂಡಾಣೆಯ ನರಿಯಂದಡ ಗ್ರಾಮದಲ್ಲಿ ಜರುಗಿದೆ.
ಸ್ಥಳೀಯ ಆಶಾ ಕಾರ್ಯಕರ್ತೆ ಗೀತಾ ತಮ್ಮ ಸ್ಕೂಟಿಯಲ್ಲಿ ಸಹಸಿಬ್ಬಂದಿ ರಮ್ಯ ಅವರ ಜೊತೆ ಚೆಯ್ಯಂಡಾಣೆಯಲ್ಲಿ ಸಭೆ ಮುಗಿಸಿ ನಾಪೋಕ್ಲುವಿಗೆ ಹಿಂತಿರುಗುವ ಸಂದರ್ಭ ಈ ಘಟನೆ ಸಂಭವಿಸಿದೆ. ನರಿಯಂದಡ ಗ್ರಾಮದ ಇಳಿಜಾರು ರಸ್ತೆಯಲ್ಲಿ ಬರುತ್ತಿರುವಾಗ ಆಕಸ್ಮಿಕವಾಗಿ ಸ್ಕೂಟಿಯಲ್ಲಿ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಸ್ಕೂಟಿಯನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದಾರೆ. ಬೆಂಕಿ ನಂದಿಸಲು ಪ್ರಯತ್ನಪಟ್ಟರು ಯಾವುದೇ ಪ್ರಯೋಜನವಾಗದೆ ಕ್ಷಣಾರ್ಧದಲ್ಲಿ ಸ್ಕೂಟಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ಕುರಿತು ಗೀತಾ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದು ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಸ್ಥಳವನ್ನು ಪರಿಶೀಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.