ವೀರಾಜಪೇಟೆ, ಮಾ. ೨೪: ವೀರಾಜಪೇಟೆ ಪುರಸಭೆ ವ್ಯಾಪ್ತಿಯ ಮೀನು-ಮಾಂಸ ಮಳಿಗೆಗಳ ವಾರ್ಷಿಕ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದ್ದು, ಈ ಬಾರಿ ರೂ. ೧೮,೩೬,೫೦೦ ನಷ್ಟವಾಗಿದೆ.

ವೀರಾಜಪೇಟೆ ಪುರಸಭೆಯ ಮುಖ್ಯಧಿಕಾರಿ ನಾಚಪ್ಪ ನೇತೃತ್ವದಲ್ಲಿ ಮೂರು ಹಂತದಲ್ಲಿ ನಡೆದ ವಾರ್ಷಿಕ ಹರಾಜು ಇಂದು ಮುಕ್ತಾಯವಾಗಿದ್ದು, ೨೦೨೬-೨೭ನೇ ಸಾಲಿನ ವಾರ್ಷಿಕ ಹರಾಜಿನಲ್ಲಿ ೧೯,೯೭,೫೦೦ ರೂ ಆದಾಯ ಬಂದಿದೆ. ಕಳೆದ ಸಾಲಿನ ಹರಾಜಿನಲ್ಲಿ ೩೮,೩೪,೦೦೦ ರೂ ಒಟ್ಟಾರೆ ಆದಾಯ ಲಭಿಸಿತ್ತ್ತು.

ಈ ಕುರಿತು ಮಾತನಾಡಿದ ಪುರಸಭೆಯ ಮುಖ್ಯಧಿಕಾರಿ ಪಟ್ಟಚೆರುವಂಡ ನಾಚಪ್ಪ, ವೀರಾಜಪೇಟೆ ಪುರಸಭೆಯ ಬಳಿಕ ಪಟ್ಟಣ ವಿಸ್ತಾರಗೊಂಡರೂ ಪಟ್ಟಣದ ಒತ್ತಿನಲ್ಲಿ ಹಲವು ಭಾಗ ಆಯಾ ಗ್ರಾ.ಪಂ. ವ್ಯಾಪ್ತಿಗೆ ಬರುತ್ತದೆ. ಅಲ್ಲಿ ಪರವಾನಿಗೆ ಶುಲ್ಕ ನೀಡಿ ಹಸಿ ಮೀನು ಹಾಗೂ ಮಾಂಸವನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಾರೆ. ಆದರೆ ಪುರಸಭೆ ವ್ಯಾಪ್ತಿಯಲ್ಲಿ ಸರಕಾರಿ ದರ ಹೆಚ್ಚಿರುವ ಕಾರಣ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಆದರಿಂದ ಬೆಲೆ ಹೆಚ್ಚಿಸುವುದರಿಂದ ತಾವು ನಷ್ಟ ಅನುಭವಿಸುತ್ತಿರುವುದಾಗಿ ವರ್ತಕರು ಹೇಳಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಈ ಬಾರಿ ಕಡಿಮೆ ಬೆಲೆಯಲ್ಲಿ ಮಳಿಗೆಯನ್ನು ಪಡೆದಿದ್ದಾರೆ. ಮುಂದೆ ಪುರಸಭೆಯ ವಾಣಿಜ್ಯ ಮಳಿಗೆ ಸೇರಿದಂತೆ ವಿವಿಧ ಕಡೆ ಮಳಿಗೆ ಹರಾಜು ಸಹ ಶೀಘ್ರದಲ್ಲಿ ನಡೆಯಲಿದ್ದು ಪುರಸಭೆಗೆ ಆದಾಯ ಕ್ರೋಢಿಕರಣಕ್ಕೆ ಒತ್ತು ನೀಡಲಾಗುತ್ತದೆ ಎಂದರು.