ಮಡಿಕೇರಿ, ಮಾ. ೨೪: “ಕುವೆಂಪು ಕಾವಿ ತೊಡದ ಸಂತ”; ಜಗತ್ತಿನ ಎಲ್ಲಾ ಪ್ರಕಾರಗಳಲ್ಲೂ ಸಾಹಿತ್ಯದ ಮೂಲಕ ಕೊಡುಗೆ ನೀಡಿದ್ದರೆ ಅದು ಕುವೆಂಪುರವರು ಮಾತ್ರ. ವೈಚಾರಿಕ ಮತ್ತು, ಧಾರ್ಮಿಕ ವಿಚಾರಗಳನ್ನು ಸಮತೋಲನೆಯಿಂದ ಗಮನಿಸಿ ಅದನ್ನು ಸಾಹಿತ್ಯದ ಮೂಲಕ ನಮಗೆ ನೀಡಿದವರು ಕುವೆಂಪು ಎಂದು ಶಕ್ತಿ ಪತ್ರಿಕೆಯ ಸಂಪಾದಕ, ಗಾಯಕ ಚಿದ್ವಿಲಾಸ್ ನುಡಿದರು.

ಅವರು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ದಿ. ಗಂಗಮ್ಮ ರಾಚಪ್ಪ ದತ್ತಿನಿಧಿ ಕಾರ್ಯಕ್ರಮದ ಕುವೆಂಪು ಗೀತ ಗಾಯನ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಕೊಡಗು ಪತ್ರಿಕಾ ಭವನದ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. ಮುಂದುವರೆದ ಅವರು ಕನ್ನಡ ಸಾಹಿತ್ಯದಲ್ಲಿ ಇರುವಷ್ಟು ಭಾವಗೀತೆ, ಜಾನಪದ ಗೀತೆ, ದಾಸರ ಪದ, ವಚನಗಳು ಇನ್ಯಾವುದೇ ಭಾಷೆಯಲ್ಲಿ ಇಲ್ಲ ಇವೆಲ್ಲವನ್ನೂ ಕೂಡಿರುವ ಸುಗಮ ಸಂಗೀತ ಬದುಕಿಗೆ ಹತ್ತಿರವಾದಂತಹ ಅರ್ಥವನ್ನು ಹೇಳುವ ಸಾಹಿತ್ಯದ ಮೂಲಕ ಭಾವನೆಗಳನ್ನು ಉತ್ಪತ್ತಿ ಮಾಡುವಂತಹ ಕಾರ್ಯಕ್ರಮಗಳ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ವಿನೂತನ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಆದರೆ ಇಂದು ಯುವಜನರನ್ನು ಉದ್ರೇಕಗೊಳಿಸುವಂತಹ, ಕಾಮನೆಗಳನ್ನು ಉತ್ತೇಜಿಸುವಂತಹ ಕೆಟ್ಟ ಸಾಹಿತ್ಯ ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿದೆ. ಅದನ್ನು ಖಂಡಿಸಬೇಕಾದದ್ದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಪ್ರಮುಖವಾಗಿ ಮಹಿಳಾ ಸಂಘಟನೆಗಳು ಇದನ್ನು ವಿರೋಧಿಸುವ ಕೆಲಸ ಮಾಡಬೇಕಾಗಿದೆ ಎಂದರು. ಚಿದ್ವಿಲಾಸ್ ರವರು ಕುವೆಂಪು ರಚಿತ ಆನಂದಮಯ ಈ ಜಗ ಹೃದಯ ಎನ್ನುವ ಹಾಡನ್ನು ಹಾಡಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

ಕುವೆಂಪು ರಚಿತ ಸಾಹಿತ್ಯದಲ್ಲಿ ಸಮಾಜಕ್ಕೆ ನೀಡಿರುವ ಸಂದೇಶಗಳು ಕುರಿತು ಮಾತನಾಡಿದ ಕುಶಾಲನಗರದ ಸಾಹಿತಿ ಉಪನ್ಯಾಸಕಿ ಎನ್.ಕೆ. ಮಾಲದೇವಿ ಅವರು ಮಾತನಾಡುತ್ತಾ ಕುವೆಂಪು ರಚಿಸಿದ ಲೇಖನಗಳ, ಕಥೆಗಳ, ಕವನಗಳ, ಕಾದಂಬರಿಗಳ, ಮಹಾಕಾವ್ಯ ಅವೆಲ್ಲದರಲ್ಲೂ ಕೂಡ ಸಮಾಜಕ್ಕೆ ಉತ್ತಮವಾದ ಸಂದೇಶವನ್ನ ನೀಡಿದ್ದಾರೆ ಎಂದರು.

ಕುವೆAಪು ಸಾಹಿತ್ಯವನ್ನು ಮನನ ಮಾಡಿದರೆ ಮಾತ್ರ ಆ ಸಂದೇಶ ನಮ್ಮ ಮನಸ್ಸಿಗೆ ನಿಲುಕಲು ಸಾಧ್ಯ. ಅವರು ೧೯೩೦ರಲ್ಲಿ ಪ್ರಕಟಿಸಿದ ಕೊಳಲು ಕವನ ಸಂಕಲನದಲ್ಲಿ ೭೦ ಕವನಗಳಿದ್ದು ನಾಡಗೀತೆ ಜಯ ಭಾರತ ಜನನಿಯ ತನುಜಾತೆ, ರೈತ ಗೀತೆಗಳು ಈ ಕವನ ಸಂಕಲನದಲ್ಲಿ ಒಳಗೊಂಡಿದೆ. ಪ್ರಕೃತಿ ಪ್ರೇಮವನ್ನು, ರಾಷ್ಟ್ರ ಪ್ರೇಮವನ್ನು, ನಾಡಪ್ರೇಮವನ್ನು ಅಧ್ಯಾತ್ಮಿಕ ಚಿಂತನೆಯನ್ನು ಒಳಗೊಂಡಿರುವAತಹ ಕವನ ಸಂಕಲನ ಇದಾಗಿದೆ. ಪಾಂಚಜನ್ಯ ಅನ್ನುವ ಇನ್ನೊಂದು ಕವನ ಸಂಕಲನದಲ್ಲಿ ದೇಶಭಕ್ತಿ, ಕ್ರಾಂತಿ, ಸ್ವಾತಂತ್ರ‍್ಯ ಹೋರಾಟ ಜಾಗೃತಿಯ ಕಾಂತಿಯನ್ನು ನೀಡಿದ್ದಾರೆ. ಓದುಗರಲ್ಲಿ ಆತ್ಮವಿಶ್ವಾಸವನ್ನು, ಧೈರ್ಯವನ್ನು, ಹೋರಾಟದ ಮನೋಭಾವವನ್ನು ಮೂಡಿಸುವ ಸಂದೇಶವಾಗಿ ಈ ಕವನ ಸಂಕಲನ ಮೂಡಿಬಂದಿದೆ ಎಂದು ಅಭಿಪ್ರಾಯಪಟ್ಟರು.

ಅವರ ಇನ್ನೊಂದು ಕವನ ಸಂಕಲನ ಪ್ರೇಮ ಕಾಶ್ಮೀರ, ಅದರಲ್ಲಿ ಅವರು ಪ್ರಣಯವನ್ನು ಪರಿಸರ ಪ್ರೇಮವನ್ನು, ಮಾನವೀಯ ಸಂಬAಧಗಳ ಆಳವಾದ ಅಭಿವ್ಯಕ್ತಿಯನ್ನು ಈ ಕವನದಲ್ಲಿ ಪ್ರಸ್ತುತಪಡಿಸಿದ್ದಾರೆ. ಇವರು ರಚಿಸಿದ ನಾಟಕಗಳಾದ ಶುದ್ರ ತಪಸ್ವಿ, ಬೆರಳ್ಗೆ ಕೊರಳ್, ರಕ್ತಾಕ್ಷಿ, ಸ್ಮಶಾನ ಕುರುಕ್ಷೇತ್ರಂ, ಯಮನ ಸೋಲು ಈ ನಾಟಕಗಳಲ್ಲಿ ಅವರು ಪೌರಾಣಿಕ ಕಥೆಯ ಮೂಲಕ ವೈಚಾರಿಕತೆಯ ಮರು ಚಿಂತನೆಯ ಮೌಲ್ಯವನ್ನು ಜೊತೆ ಜೊತೆಗೆ ಮಾನವೀಯತೆಯ ವಾದವನ್ನು ಬಿಂಬಿಸುವAತಹ ಸಂದೇಶ ನೀಡಿದ್ದಾರೆ ಎಂದು ವಿಶ್ಲೇಷಿಸಿದರು.

ತಮ್ಮ ಜೀವನ ಚರಿತ್ರೆ “ನೆನಪಿನ ದೋಣಿಯಲ್ಲಿ'' ಕೃತಿಯಲ್ಲಿ ಜಾತಿ ಮತಗಳನ್ನು ಮೀರಿ ಮನುಷ್ಯ ಹೇಗೆ ಬೆಳೆಯಬೇಕು, ವಿಶ್ವಮಾನವತೆಯ ಕಡೆ ಸಾಗಬೇಕು ಎನ್ನುವ ಕುರಿತು ರಾಮಕೃಷ್ಣ ಪರಮಹಂಸರ ವಿವೇಕಾನಂದರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವ ಸಂದೇಶ ನೀಡಿದ್ದಾರೆ. ಕೇವಲ ಕವಿತೆ, ಕಾದಂಬರಿ, ನಾಟಕ ಮಾತ್ರವಲ್ಲದೆ ವಿಮರ್ಶೆ, ಭಾಷಣ, ಲೇಖನಗಳಲ್ಲಿ ಕೂಡ ಚಿಂತನೆ ಒರೆಹಚ್ಚುವ ಅನೇಕ ವಿಚಾರಗಳನ್ನು ನೀಡಿದ್ದಾರೆ. ಇವರ ಪ್ರಖ್ಯಾತ ಕಾದಂಬರಿಯಾದ ಕಾನೂನು ಹೆಗ್ಗಡತಿಯಲ್ಲಿ ಸ್ವಾತಂತ್ರ‍್ಯ ಪೂರ್ವದ ಊಳಿಗಮಾನ್ಯ ಪದ್ಧತಿ ಮೌಡ್ಯ, ಲಿಂಗ ಅಸಮಾನತೆ, ಭೂಮಿಗಾಗಿ ಜಗಳ ಇವುಗಳನ್ನು ಕಾಣುತ್ತೇವೆ ಮತ್ತು ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಜಾತಿ ವ್ಯವಸ್ಥೆ, ಮೌಲ್ಯ, ಕಟ್ಟುಪಾಡುಗಳನ್ನ ಈ ಕಾದಂಬರಿ ವಿವರಿಸುತ್ತಾ ಹೋಗುತ್ತದೆ. ಈ ರೀತಿಯಲ್ಲಿ ತಮ್ಮ ಸಾಹಿತ್ಯದಲ್ಲಿ ಸಮಾಜದ ಅಂಕುಡೊAಕುಗಳನ್ನು ತಿದ್ದುವ ವಿಚಾರಗಳ ಮೂಲಕ ಕುವೆಂಪು ವಿಶ್ವಮಾನವರಾಗಿ ರಸ ಋಷಿಯಾಗಿ ರಾಷ್ಟ್ರಕವಿಯಾಗಿ ನಮ್ಮ ಮುಂದಿದ್ದಾರೆ ಎಂದರು

ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ ರಮೇಶ್ ಆಡುಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಕುವೆಂಪು ಮುಟ್ಟದ ಸಾಹಿತ್ಯ ಪ್ರಕಾರಗಳಿಲ್ಲ ಎಂದರು.

ಕುವೆAಪು ಕುಟುಂಬಸ್ಥೆ ಕೊಡಗು ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಕೆ.ಪಿ ಚಂದ್ರಕಲಾ ಅವರು ಮಾತನಾಡಿ, ಕುವೆಂಪುರವರು ಆದರ್ಶವನ್ನು ಕತೆ ಕಾದಂಬರಿ ಲೇಖನದಲ್ಲಿ ಮಾತ್ರ ಇಟ್ಟುಕೊಂಡಿರಲಿಲ್ಲ ಅವರು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಅವರು ಮರಣ ಹೊಂದಿದಾಗ ಅವರಿಗೆ ತಿಥಿಕರ್ಮಾಂತರವನ್ನು ಮಾಡಬಾರದು ಎನ್ನುವ ಅವರ ಸೂಚನೆಯಂತೆ ಅವರ ತಿಥಿಕರ್ಮಾಂತರವನ್ನು ಮಾಡಿರಲಿಲ್ಲ. ಅವರಿಗೆ ಮಂತ್ರ ಮಾಂಗಲ್ಯ ಎನ್ನುವ ಸೂತ್ರದ ಸರಳ ಮದುವೆಯ ಬಗ್ಗೆ ತುಂಬಾ ಆಸಕ್ತಿ ಇತ್ತು. ತನ್ನ ಮದುವೆ ಕೂಡ ಅದೇ ರೀತಿ ನಡೆದಿತ್ತು ಎಂದು ನೆನಪಿಸಿಕೊಂಡರು.

ದತ್ತಿದಾನಿ, ಶಿಕ್ಷಕಿ ಸ್ನೇಹ ಬಸಮ್ಮರವರು ಮಾತನಾಡಿ, ದತ್ತಿ ಇಟ್ಟ ಉದ್ದೇಶ ಯುವಜನರಲ್ಲಿ ಕುವೆಂಪು ಸಾಹಿತ್ಯ, ಸಾಹಿತ್ಯದ ಕುರಿತು ಚರ್ಚೆ ಪ್ರಬಂಧಗಳು, ಸ್ಪರ್ಧೆಗಳು ನಡೆಯಬೇಕು ಎನ್ನುವುದಾಗಿತ್ತು. ಆದರೆ ಯುವಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸದಿರುವುದು ಬೇಸರ ತಂದಿದೆ ಎಂದರು. ಇನ್ನೋರ್ವ ಮುಖ್ಯ ಅತಿಥಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಅಧ್ಯಾಪಕ ಮ.ನ ವೆಂಕಟ್ ನಾಯಕ್ ರವರು ಮಾತನಾಡಿ, ಕುವೆಂಪು ವಿಚಾರಧಾರೆಗಳು, ಅವರ ಆದರ್ಶಗಳು, ಅವರ ಲೇಖನಗಳು, ಅವರ ಸಾಹಿತ್ಯ ಎಲ್ಲವನ್ನು ಗಮನಿಸಿದರೆ ಕುವೆಂಪು ಕರ್ನಾಟಕದಲ್ಲಿ ಹುಟ್ಟದಿದ್ದರೆ ಕನ್ನಡ ಸಾಹಿತ್ಯ ಇಷ್ಟು ಸಮೃಧವಾಗಿ ಬೆಳೆಯುತ್ತಿರಲಿಲ್ಲ. ಸಾಮಾಜೀಕರಣವೂ ಆಗುತ್ತಿರಲಿಲ್ಲ. ಆಂಗ್ಲವನ್ನು ಕಲಿತವರು, ಸಂಸ್ಕೃತವನ್ನು ಕಲಿತವರು ಕುವೆಂಪು ಆದರೆ ಕನ್ನಡವನ್ನು ಕಟ್ಟಿದವರು ಕುವೆಂಪು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಮಾತನಾಡಿ, ಯುವ ಜನಾಂಗಕ್ಕೆ ಕುವೆಂಪು ಸಂದೇಶ ತಲುಪಬೇಕು ಎನ್ನುವ ನಿಟ್ಟಿನಲ್ಲಿ ಈ ದತ್ತಿ ಸ್ಥಾಪಿಸಿದ್ದು ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭ ಆದ್ದರಿಂದ ಯುವಕರ ಕೊರತೆ ಇಂದಿನ ಕಾರ್ಯಕ್ರಮದಲ್ಲಿ ಕಂಡು ಬರುತ್ತಿವೆ. ಕುವೆಂಪು ಎಲ್ಲಾ ಪ್ರಕಾರಗಳನ್ನು ಸಾಹಿತ್ಯ ರಚಿಸಿದವರು ಗಗನದಲ್ಲಿ ಓಡುವ ಚಂದಿರ ದೇವರ ಪೇಪರ ಮೆಂಟೇನಮ್ಮ ಹದಿನೈದು ದಿನ ಕರಗುತ್ತದೆ ಪುನಃ ಬೆಳೆಯುತ್ತದೆ ಎಂದು ಮಗು ತಾಯಿಯನ್ನು ಕೇಳುವ ಪರಿಯನ್ನು ವಿವರಿಸುವ ರೀತಿ ಮನ ಮುಟ್ಟುವಂತಿದೆ ಎಂದರು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಗಾಯಕರು ಉತ್ತಮವಾದ ಕುವೆಂಪು ರಚಿಸಿದ್ದ ಗೀತೆಗಳ ಗಾಯನ ಪ್ರಸ್ತುತಪಡಿಸಿದ್ದಾರೆ. ಗಾಯನಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು ಮತ್ತು ಕೊಡಗು ಪತ್ರಿಕಾ ಭವನ ಟ್ರಸ್ಟ್ ಸದಾ ಸಿದ್ಧವಿದೆ. ಗಾಯಕರು ಹಾಡುವ ಯೋಜನೆಯನ್ನು ಏರ್ಪಡಿಸಿದರೆ ಎಲ್ಲಾ ರೀತಿಯ ಸಹಕಾರವಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಗಾಯಕ ಕುಶಾಲನಗರದ ಬಿ ಎಸ್ ಪರಮೇಶ್ ರೈತ ಗೀತೆ ಹಾಡಿದರು. ಅಧ್ಯಾಪಕಿ ಜಯಲಕ್ಷಿö್ಮ ಮತ್ತು ತಂಡದವರು ನಾಡಗೀತೆ, ಜಯ ಭಾರತ ಜನನಿಯ ತನುಜಾತೆ, ದೋಣಿ ಸಾಗಲಿ ಮುಂದೆ ಹೋಗಲಿ, ಸದ್ದಿರದ ಹೆಸರುಡೆಯ ಹಾಡುಗಳನ್ನು ಹಾಡಿದರು. ಕೊಡಗು ವಿದ್ಯಾಲಯದ ಕೆ.ವಿ ರವಿ ಅವರು ಎಲ್ಲಾದರೂ ಇರು ಎಂತಾದರು ಇರು ಹಾಡನ್ನು ಪ್ರಸ್ತುತಪಡಿಸಿದರು. ಅಮೃತ್ ರಾಜ್ ಮತ್ತು ಅನಿತಾ ರಾಜ್ ಸಹೋದರರು ನೂರು ದೇವರನ್ನೆಲ್ಲ ನೂಕಾಚೆ ದೂರ ಎನ್ನುವ ವೈಚಾರಿಕ ಗೀತೆಯನ್ನು ಹಾಡಿದರು. ಗಾಯಕಿ ರಶ್ಮಿ ಅವರು ದೋಣಿ ಸಾಗಲಿ ಮುಂದೆ ಹೋಗಲಿ ಹಾಡನ್ನು, ಗಾಯಕಿ ಹೇಮಾ ಅಜಿತ್ ದೂರಾ ಬಹುದೂರ ಹೋಗುವ ಬಾರ ಎನ್ನುವ ಗೀತೆಯನ್ನು ಗಾಯಕ, ಸಬ್ ಇನಸ್ಪೆಕ್ಟರ್ ಧನಂಜಯ್ ರವರು ಬಾ ಇಲ್ಲಿ ಸಂಭವಿಸು ಮತ್ತು ಇಳಿದು ಬಾ ತಾಯಿ ಗಾಯನವನ್ನು ಪ್ರಸ್ತುತಪಡಿಸಿದರು. ಕುಶಾಲನಗರ ತಾಲೂಕು ಕಸಾಪ ಕೋಶಾಧಿಕಾರಿ ಕೆ.ವಿ ಉಮೇಶ್ ರವರು ನೂರು ದೇವರನ್ನೆಲ್ಲ ನೂಕಾಚೆ ದೂರ ಹಾಡನ್ನು ಹಾಡಿದರು. ಚಿದ್ವಿಲಾಸ್ ಅವರು ಹಾಡಿದ ತನುವು ನಿನ್ನದು ಮನವು ನಿನ್ನದು ಹಾಡಿನ ಮೂಲಕ ಕಾರ್ಯಕ್ರಮ ಮುಕ್ತಾಯಗೊಂಡಿತು.

ಇತ್ತೀಚೆಗೆ ನಿಧನರಾದ ಜಿಲ್ಲೆಯ ಹಿರಿಯ ಗಾಯಕ ಲಿಯಾಕತ್ ಆಲಿಯವರಿಗೆ ಸಭೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಧ್ಯಾಪಕಿ ಕೆ ಜಯಲಕ್ಷ್ಮಿ ನಿರೂಪಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಸ್ವಾಗತಿಸಿದರು. ನಿರ್ದೇಶಕ ಸುಲೇಮಾನ್ ವಂದಿಸಿದರು.