ಚೆಯ್ಯಂಡಾಣೆ, ಮಾ. ೨೫: ಕಕ್ಕಬೆ ಸಮೀಪದ ಕುಂಜಿಲ ಪೈನರಿ ಮಖಾಂ ಉರೂಸ್ ಸಮಾರಂಭವು ತಾ.೨೭ ರಿಂದ ೩೧ ರ ತನಕ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಪೈನರಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಎಂ.ಎ. ಸೌಕತ್ ಅಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಾರ್ಯದರ್ಶಿ ಸಹೀದ್ ಪಯ್ಯಡತ್ ಮಾತನಾಡಿ, ಜುಮಾ ನಮಾಜಿನ ಬಳಿಕ ಪೈನರಿ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಎಂ.ಎ.ಸೌಕತ್ ಅಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.

ಕುಂಜಿಲ ಮುದರ್ರಿಸ್ ನಿಝಾರ್ ಅಹ್ಸನಿ ಕಕ್ಕಡಿಪುರಂ ಅವರು ಮಖಾಂ ಅಲಂಕಾರ ಹಾಗೂ ಪ್ರಾರ್ಥನೆಗೆ ನೇತೃತ್ವ ವಹಿಸಲಿದ್ದಾರೆ. ರಾತ್ರಿ ಪ್ರಖ್ಯಾತ ವಾಗ್ಮಿ ಹಂಝ ಮಿಸ್ಬಾಹಿ ಓಟಪಡವು ಧಾರ್ಮಿಕ ಪ್ರವಚನ ನಡೆಸಲಿದ್ದಾರೆ. ತಾ.೨೮ ರಂದು ರಾತ್ರಿ ಮುಸ್ತಫಾ ಸಖಾಫಿ ತೆನ್ನಲ ಮತ ಪ್ರವಚನಕ್ಕೆ ನೇತೃತ್ವ ವಹಿಸಲಿದ್ದಾರೆ. ತಾ.೨೯ ರಂದು ಸಯ್ಯಿದ್ ಎಳಂಗೂರ್ ತಂಙಳ್ ನೇತೃತ್ವದಲ್ಲಿ ಸ್ವಲಾತ್ ವಾರ್ಷಿಕ ಮತ್ತು ದುಆ ಮಜ್ಲಿಸ್ ನಡೆಯಲಿದ್ದು,ಅಬ್ದುಲ್ ರಝಕ್ ಅಬ್ರಾರಿ ಧಾರ್ಮಿಕ ಪ್ರವಚನ ನಡೆಸಲಿದ್ದಾರೆ.

ತಾ.೩೦ರಂದು ಮದ್ಯಾಹ್ನ ೧.೩೦ಗಂಟೆಗೆ ಜಮಾಅತ್ ಅಧ್ಯಕ್ಷ ಎಂ.ಎ ಸೌಕತ್ ಅಲಿ ಅಧ್ಯಕ್ಷತೆಯಲ್ಲಿ ಸೌಹಾರ್ದ ಸಮ್ಮೇಳನ ನಡೆಯಲಿದ್ದು ಕುಂಜಿಲ ಮುದರ್ರಿಸ್ ನಿಝಾರ್ ಅಹ್ಸನಿ ಕಕ್ಕಡಿಪುರಂ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕೇರಳದ ಪ್ರಖ್ಯಾತ ವಾಗ್ಮಿ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಧಾರ್ಮಿಕ ಮತ ಪ್ರಭಾಷಣ ನಡೆಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಸಂಜೆ ೪ ಗಂಟೆಗೆ ಮೌಲೂದ್ ಪಾರಾಯಣ ಹಾಗೂ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಲಿದೆ. ತಾ. ೩೧ ರಂದು ರಾತ್ರಿ ಸಮಾರೋಪ ಸಮಾರಂಭ ನಡೆಯಲಿದ್ದು ಪ್ರಖ್ಯಾತ ವಾಗ್ಮಿ ಹಾಫಿಲ್ ಅಹ್ಮದ್ ಕಬೀರ್ ಬಾಖವಿ ಅವರು ಮುಖ್ಯ ಪ್ರಭಾಷಣ ನಡೆಸಲಿದ್ದಾರೆ. ಗೋಷ್ಠಿಯಲ್ಲಿ ಪೈನರಿ ಜಮಾಅತ್ ಉಪಾಧ್ಯಕ್ಷ ವಿ. ಎ.ಅಬ್ದುಲ್ ರಹ್ಮಾನ್, ಕೋಶಾಧಿಕಾರಿ ಹಂಝ ಕೆ.ಎಚ್, ದರ್ಸ್ ಸಮಿತಿ ಅಧ್ಯಕ್ಷ ಹಂಝ ಟಿ.ಯು, ರಿಲೀಫ್ ಉಪಾಧ್ಯಕ್ಷ ರಶೀದ್ ಮಕ್ಕಿ, ಸಲಹಾ ಸಮಿತಿ ಸದಸ್ಯರಾದ ವಯಕೋಲ್ ಮೂಸ, ಸಲಾಂ ಉಪಸ್ಥಿತರಿದ್ದರು.