ಶ್ರೀಮಂಗಲ, ಮಾ. ೨೯: ಕೊಡವ ತಕ್ಕ್ ಎಳ್ತ್ಕಾರಡ ಕೂಟದ ಸ್ಥಾಪಕ ಸದಸ್ಯ, ಮಾಜಿ ಅಧ್ಯಕ್ಷ, ಖ್ಯಾತ ಸಾಹಿತಿ, ನಾಟಕಕಾರ, ನಿರೂಪಕ, ಬಾಳೋಪಾಟ್ ಸೇರಿದಂತೆ ಕೊಡವ ಜಾನಪದ ಆಟ್ ಪಾಟ್ ತಜ್ಞ, ಜಾನಪದ ಕಲೆಯ ತೀರ್ಪುಗಾರ, ಉತ್ತಮ ವಾಗ್ಮಿ, ಹಲವು ಕೊಡವ ಹಾಗೂ ಕನ್ನಡ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದ ಬೊಟ್ಟೋಳಂಡ ಮಿಟ್ಟು ಪೂಣಚ್ಚ ಅವರ ನಿಧನ ಹಿನ್ನೆಲೆ ‘ಕೊಡವ ತಕ್ಕ್ ಎಳ್ತ್ಕಾರಡ ಕೂಟದಿಂದ ಶ್ರದ್ಧಾಂಜಲಿ ಸಭೆ ನಡೆಯಿತು.
ಕೂಟದ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಿಟ್ಟು ಪೂಣಚ್ಚ ಅವರು ಕೊಡವ ಸಾಹಿತ್ಯ, ಜಾನಪದ, ಸಂಸ್ಕೃತಿ ಕ್ಷೇತ್ರಕ್ಕೆ ನೀಡಿದ ಕೊಡುಗೆ, ಸಲ್ಲಿಸಿದ ಸೇವೆ ಬಗ್ಗೆ ಗುಣಗಾನ ಮಾಡುವುದರೊಂದಿಗೆ ಮೌನಾಚರಣೆ ಮಾಡಿ ಶಾಂತಿ ಕೋರಲಾಯಿತು.
ಸಾಹಿತ್ಯ, ಕ್ರೀಡೆ, ಸಾಮಾಜಿಕ ಚಟುವಟಿಕೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡು ಜನಾನುರಾಗಿಯಾಗಿದ್ದು ಅಕಾಲಿಕ ಮರಣವನ್ನಪ್ಪಿದ ಬೊಟ್ಟೋಳಂಡ ಮಿಟ್ಟು ಪೂಣಚ್ಚ ಅವರಿಗೆ ಬಲ್ಲಮಾವಟಿಯಲ್ಲಿ ಸಾರ್ವಜನಿಕ ಶ್ರದ್ಧಾಂಜಲಿಯೊAದಿಗೆ ನುಡಿ ನಮನ ಅರ್ಪಿಸಲು ತೀರ್ಮಾನಿಸಲಾಯಿತು.