ವೀರಾಜಪೇಟೆ, ಮಾ. ೩೦: ವೀರಾಜಪೇಟೆ ಪುರಸಭೆ ವ್ಯಾಪ್ತಿಯ ಶುಭಾಷ್ ನಗರ ಒಳಗೊಂಡAತೆ ವಾರ್ಡ್ ಸಂಖ್ಯೆ ೯ ರಲ್ಲಿ ನೂತನವಾಗಿ ನಿರ್ಮಾಣಗೊಂಡ ೯ ಕಾಂಕ್ರೀಟ್ ರಸ್ತೆಗಳನ್ನು ಏಕಕಾಲದಲ್ಲಿ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಉದ್ಘಾಟನೆ ಮಾಡಿದರು.
ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ವೀರಾಜಪೇಟೆ ಪುರಸಭೆಗೆ ನೀಡಿದ ವಿಶೇಷ ಅನುದಾನದಲ್ಲಿ ವಾರ್ಡ್ ಸಂಖ್ಯೆ ೯ಕ್ಕೆ ರೂ. ೮೦ ಲಕ್ಷ ಅನುದಾನ ಒದಗಿಸಲಾಗಿದ್ದು ಈ ಅನುದಾನದಲ್ಲಿ ನಿರ್ಮಾಣಗೊಂಡಿರುವ ೯ ನೂತನ ಕಾಂಕ್ರೀಟ್ ರಸ್ತೆಗಳನ್ನು ಶಾಸಕರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಶಾಸಕರು ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಒಂದುಕೋಟಿ ರೂಪಾಯಿಯನ್ನು ಪುರಸಭೆಗೆ ಮೀಸಲಿಟ್ಟು ಕಾಮಗಾರಿ ಆರಂಭ ಮಾಡಿದ್ದೇವೆ. ವಿಶೇಷ ಅನುದಾನವನ್ನು ಮುಖ್ಯಮಂತ್ರಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲರೂ ಅಭಿವೃದ್ಧಿಗೆ ನಮ್ಮೊಂದಿಗೆ ಕೈ ಜೋಡಿಸಬೇಕು ಎಂದರು.
ಪುರಸಭೆ ಮಾಜಿ ಸದಸ್ಯ ಮಹಮ್ಮದ್ ರಾಫಿ ಮಾತನಾಡಿ ಶಾಸಕರು ಅನುದಾನ ಒದಗಿಸಿಕೊಟ್ಟು ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿದ್ದಲ್ಲದೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟು ಸಹಕರಿಸಿದ್ದಾರೆ ಎಂದರು. ಸುಭಾಷ್ ನಗರ, ಸಿಲ್ವಾನಗರ ಹಾಗೂ ವಿದ್ಯಾನಗರ ವಾರ್ಡ್ ವ್ಯಾಪ್ತಿಯಲ್ಲಿ ಈ ರಸ್ತೆಗಳು ನಿರ್ಮಾಣಗೊಂಡಿದ್ದು, ಉದ್ಘಾಟನೆ ಸಂದರ್ಭ ಸಾರ್ವಜನಿಕರು ಹಾಗೂ ಪ್ರಮುಖರು ಉಪಸ್ಥಿತರಿದ್ದು ಶಾಸಕರನ್ನು ಸನ್ಮಾನಿಸಿದರು.
ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ಮಹಿಳಾ ಅಧ್ಯಕ್ಷೆ ನಯನ, ಪುರಸಭೆ ಮಾಜಿ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಪುರಸಭೆ ಮಾಜಿ ಸದಸ್ಯರುಗಳಾದ ರಾಜೇಶ್, ಬೆನ್ನಿ ಆಗಷ್ಟಿನ್, ರಜಿನಿಕಾಂತ್, ಅತಿಫ್ ಮನ್ನ, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಹನೀಫ್, ತಾಲೂಕು ಅಧ್ಯಕ್ಷ ರಫೀಕ್, ಸ್ಥಾಯಿ ಸಮಿತಿ ಅಧ್ಯಕ್ಷ ಜಲಿಲ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಆರ್. ಕೆ. ಸಲಾಂ, ಸಾಮಾಜಿಕ ಜಾಲತಾಣದ ಸೂರಜ್ ಹೊಸೂರು, ಜೋಕಿಮ್, ಮಂಜುನಾಥ್, ಕುಂಡಚ್ಚಿರ ಮಂಜು ದೇವಯ್ಯ, ಅನಿಲ್, ಚೇಕು, ಸಂತೋಷ್ ಹಾಗೂ ಪಕ್ಷದ ಮುಖಂಡರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.