ಕುಶಾಲನಗರ, ಮಾ. ೩೦: ಸಮೀಪದ ಬೈಲುಕೊಪ್ಪ ಸರಕಾರಿ ಶಾಲೆ ಮುಂಭಾಗ ಭಾನುವಾರ ರಾತ್ರಿ ಹೆದ್ದಾರಿಯಲ್ಲಿ ಹಿಟ್ ಅಂಡ್ ರನ್‌ಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಯುವಕನೊಬ್ಬ ಬಲಿಯಾಗಿದ್ದಾನೆ.

ಕೊಪ್ಪ ನಿವಾಸಿ ಅನಿಲ್ (೩೩) ಮೃತ ದುರ್ದೈವಿ. ಕೊಪ್ಪ ಕಡೆಯಿಂದ ಬೈಲುಕುಪ್ಪೆ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದ ಅನಿಲ್‌ನ ಬೈಕ್‌ನ ಮುಂಭಾಗ ಚಲಿಸುತ್ತಿದ್ದ ಆಟೋಗೆ ಅಪರಿಚಿತ ಕಾರು ಡಿಕ್ಕಿಯಾಗಿದೆ. ಈ ವೇಳೆ ಆಟೋ ಹಿಂದೆ ಬೈಕ್‌ನಲ್ಲಿದ್ದ ಅನಿಲ್ ರಸ್ತೆಗೆ ಬಿದ್ದಿದ್ದು, ಕಾರು ಅನಿಲ್ ಎದೆಯ ಮೇಲೆ ಹರಿದಿದೆೆ. ಇದರಿಂದ ತೀವ್ರ ಗಾಯಗೊಂಡು ಅನಿಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ನಡೆದು ೨೪ ಗಂಟೆ ಕಳೆದರೂ ಅಪಘಾತ ನಡೆಸಿದ ಕಾರನ್ನು ಪತ್ತೆಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಮೃತನ ಸಂಬAಧಿಕರು, ಸ್ನೇಹಿತರು, ಗ್ರಾಮದ ನಾಗರಿಕರು ಆರೋಪಿಸಿ ಬೈಲುಕುಪ್ಪೆ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ, ರಸ್ತೆ ತಡೆ ನಡೆಸಿದರು.

ಅಲ್ಲದೆ ಅಪಘಾತ ನಡೆದ ಸ್ಥಳದಲ್ಲಿ ನಿರ್ಮಿಸಿರುವ ರೋಡ್ ಡಿವೈಡರ್ ಅನಾವಶ್ಯಕವಾಗಿದ್ದು ಅವೈಜ್ಞಾನಿಕವಾಗಿರುವ ಹಿನ್ನೆಲೆಯಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿವೆ. ಇದರ ನಡುವೆ ನೀರಾವರಿ ನಿಗಮದ ಮೂಲಕ ನಡೆಯುತ್ತಿದ್ದ ಪೈಪ್ ಲೈನ್ ಕಾಮಗಾರಿ ಹಿನ್ನೆಲೆ ಒಂದು ಭಾಗದಲ್ಲಿ ಮಾತ್ರ ವಾಹನಗಳ ಸಂಚಾರಕ್ಕೆ ಅವಕಾಶವಿದ್ದ ಹಿನ್ನೆಲೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದ್ದು ಅಧಿಕಾರಿಗಳ ನಿರ್ಲಕ್ಷದಿಂದ ಘಟನೆ ಸಂಭವಿಸಿದೆ ಎಂದು ಪ್ರತಿಭಟನಾಕಾರರು ದೂರಿದರು. ಮೃತ ಅನಿಲ್ ಖಾಸಗಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ೧೦ ತಿಂಗಳ ಗಂಡು ಮಗು ಸೇರಿದಂತೆ ಪತ್ನಿ, ಪೋಷಕರನ್ನು ಅಗಲಿದ್ದಾರೆ. ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಪಿರಿಯಾಪಟ್ಟಣದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಿಸಿ ಪರಾರಿಯಾದ ಕಾರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.