ಸೋಮವಾರಪೇಟೆ, ಏ. ೧: ಮಡಿಕೇರಿ ತಾಲೂಕಿನ ಮಕ್ಕಂದೂರಿನಲ್ಲಿ ಕೋಟಿ ಚೆನ್ನಯ್ಯ ನೇಮೋತ್ಸವ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು. ಮಕ್ಕಂದೂರು ಗ್ರಾಮದ ದಿ.ಉಗ್ಗಪ್ಪ ಪೂಜಾರಿ ಮತ್ತು ಪಾರ್ವತಿ ಅವರ ಮನೆ ಆವರಣದಲ್ಲಿರುವ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆದವು. ಹಾಲೇರಿಯ ಸ್ವಗ್ರಾಮದಿಂದ ದೇವರ ಭಂಡಾರವನ್ನು ತಂದು ಕೋಟಿ ಚೆನ್ನಯ್ಯರ ದರ್ಶನ ಪೂಜೆ ನಡೆಯಿತು.
ನಂತರ ಕಿನ್ನಿದಾರು ದರ್ಶನ, ಗಂಧ ಪ್ರಸಾದ ವಿತರಿಸಲಾಯಿತು. ಕುಟುಂಬದ ಹಿರಿಯರಾದ ಎಲ್ಯಣ್ಣ ಪೂಜಾರಿ ಅವರ ಮಾರ್ಗದರ್ಶನದಂತೆ ೪೧ನೇ ನೇಮೋತ್ಸವದ ಅಂಗವಾಗಿ ನಾಗನ ತಂಬಿಲ ಸೇವೆ, ಶ್ರೀ ಬ್ರಹ್ಮ ಬೈದರ್ಕಳ ಗರಡಿ ಇಳಿಯುವುದು, ಹಣ್ಣುಕಾಯಿ ಸ್ವೀಕಾರ, ಕಿನ್ನಿದಾರು ರಂಗ ಸ್ಥಳ ಪ್ರವೇಶ, ಶ್ರೀ ಕೋಟಿ ಚೆನ್ನಯ್ಯರ ದರ್ಶನ, ದೈವದ ಹರಕೆ ಮತ್ತು ಗಂಧ ಪ್ರಸಾದ ವಿತರಣೆ, ಗರಡಿಯಲ್ಲಿ ಹಾಲು ಕುಡಿಯುವುದು, ಮೊದಲ ಗೊನೆ ಕಡಿಯುವ ಪೂಜಾ ಕೈಂಕರ್ಯಗಳು ನೆರವೇರಿದವು.
ಸುತ್ತಮುತ್ತಲಿನ ಗ್ರಾಮಸ್ಥರು ಮಾತ್ರವಲ್ಲದೇ, ಹೊರ ಜಿಲ್ಲೆಯಿಂದಲೂ ಭಕ್ತಾದಿಗಳು ನೇಮೋತ್ಸವದಲ್ಲಿ ಭಾಗಿಯಾಗಿದ್ದರು.