ಮಡಿಕೇರಿ ಮೇ ೩: ಮಾದಾಪುರದಲ್ಲಿನ ಕೊಡವ ಸಮಾಜದ ನೂತನ ಸಮುದಾಯ ಭವನದ ಉದ್ಘಾಟನೆ ತಾ. ೫ ರಂದು ಜರುಗಲಿದ್ದು, ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೂತನವಾಗಿ ನಿರ್ಮಿಸಲ್ಪಟ್ಟ ಸುಸಜ್ಜಿತ ಸಮುದಾಯ ಭವನವನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಕೊಡವ ಸಮಾಜದ ಅಧ್ಯಕ್ಷ ಮಂಡೇಪAಡ ಮನು ಮೇದಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಂ. ಮನು ಮೇದಪ್ಪ, ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ರೂ. ೧ ಕೋಟಿ ಅನುದಾನ ಈ ಉದ್ದೇಶಕ್ಕೆ ಬಿಡುಗಡೆಯಾಗಿತ್ತು. ಈ ಪೈಕಿ ರೂ. ೭೫ ಲಕ್ಷ ಅನುದಾನ ಬಿಡುಗಡೆಯಾಗಿದ್ದು, ರೂ. ೨೫ ಲಕ್ಷ ಅನುದಾನ ದೊರಕಬೇಕಾಗಿದೆ ಎಂದರು. ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ವಿಶೇಷ ಪ್ರಯತ್ನದಿಂದ ಹಾಗೂ ಮಾಜಿ ಸಂಸದರು, ಮಾಜಿ ಶಾಸಕರ ಪ್ರಯತ್ನದಿಂದ ಸೂಕ್ತ ಅನುದಾನ ನೀಡಲ್ಪಟ್ಟಿತ್ತು. ಅನೇಕ ದಾನಿಗಳಿಂದಲೂ ಆರ್ಥಿಕ ಸಂಪನ್ಮೂಲ ಸಂಗ್ರಹವಾಗಿದೆ ಎಂದು ಸ್ಮರಿಸಿಕೊಂಡ ಮೇದಪ್ಪ, ಹಾಲಿ ಶಾಸಕ ಡಾ. ಮಂತರ್ ಗೌಡ ಅವರು ರೂ. ೧೦ ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯನ್ನು ಸಮುದಾಯ ಭವನಕ್ಕೆ ನಿರ್ಮಿಸಲು ಒಪ್ಪಿದ್ದಾರೆ ಎಂದು ತಿಳಿಸಿದರು.
ಕೊಡವ ಸಮುದಾಯ ಭವನವು ರೂ. ೪.೫೦ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು ಈವರೆಗೆ ರೂ. ೩.೫೦ ಕೋಟಿಗಳಷ್ಟು ಕಾಮಗಾರಿ ಕಾರ್ಯಗಳು ನಡೆದಿದ್ದು, ಇನ್ನೂ ೧ ಕೋಟಿ ಮೌಲ್ಯದ ಕಾಮಗಾರಿ ಬಾಕಿಯಿದೆ. ಸಮುದಾಯ ಭವನಕ್ಕಾಗಿ ೫ ಎಕರೆ ಜಾಗವನ್ನು ಮಾದಾಪುರ ಕೊಡವ ಸಮಾಜದಿಂದ ಖರೀದಿಸಲಾಗಿದ್ದು, ಇಲ್ಲಿ ೧ ಸಾವಿರ ವಾಹನಗಳ ನಿಲುಗಡೆಗೆ ಅವಕಾಶವಿದೆ. ಸಮುದಾಯ ಭವನದೊಳಗೆ ೭೦೦ ಆಸನಗಳ ಸಾಮರ್ಥ್ಯವಿದ್ದು ಅಂದಾಜು ೨ ಸಾವಿರ ಜನರು ಪಾಲ್ಗೊಳ್ಳುವಷ್ಟು ಸಾಮರ್ಥ್ಯವನ್ನು ಸಮುದಾಯ ಭವನ ಹೊಂದಿದೆ ಎಂದು ಎಂ.ಪಿ. ಮೇದಪ್ಪ ವಿವರಿಸಿದರು. ವಿವಾಹ ಸಮಾರಂಭ, ನಾಮಕರಣ, ನಿಶ್ಚಿತಾರ್ಥ ಸೇರಿದಂತೆ ಎಲ್ಲಾ ರೀತಿಯ ಸಭೆ ಸಮಾರಂಭಗಳಿಗೂ ಅವಕಾಶ ಕಲ್ಪಿಸಲಾಗುವುದು. ಕೊಡವ ಮಾತ್ರವಲ್ಲದೇ ಸಮುದಾಯ ಭವನದಲ್ಲಿ ಕೊಡವೇತರರ ಕಾರ್ಯಕ್ರಮಗಳಿಗೂ ಅವಕಾಶ ನೀಡಲಾಗುತ್ತದೆ. ೫ ಅತಿಥಿ ಗೃಹಗಳನ್ನೂ ನಿರ್ಮಿಸಲಾಗಿದೆ. ಭವನವನ್ನು ಸುಸಜ್ಜಿತವಾಗಿ ರೂಪಿಸಲಾಗಿದೆ ಎಂದರು.
ತಾ. ೫ ರಂದು ಬೆಳಿಗ್ಗೆ ೧೦ ಗಂಟೆಗೆ ಆಯೋಜಿತ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ, ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ, ಸಂಸದ ಯದುವೀರ್ ಒಡೆಯರ್, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ, ಶಾಸಕರು ಮತ್ತು ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎಸ್. ಅಶ್ವಥ ನಾರಾಯಣ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ, ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್, ಮಾಜಿ ಸಚಿವ ಯಂ.ಸಿ. ನಾಣಯ್ಯ, ವಿಧಾನಸಭೆಯ ಮಾಜಿ ಸಭಾಧ್ಯಕ್ಷ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕೆ.ಜಿ. ಬೋಪಯ್ಯ, ಮಾಜಿ ಸಚಿವ ಬಿ.ಎ. ಜೀವಿಜಯ ಸೇರಿದಂತೆ ಹಲವು ಗಣ್ಯರು, ಕೊಡವ ಸಮಾಜಗಳ ಅಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ.
ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಗೌರವಾಧ್ಯಕ್ಷರಾಗಿರುವ ಮಾದಾಪುರ ಕೊಡವ ಸಮಾಜದ ಉಪಾಧ್ಯಕ್ಷರಾಗಿ ಪಾಸುರ ಎನ್. ಉತ್ತಪ್ಪ, ಕಾರ್ಯದರ್ಶಿಯಾಗಿ ನಾಗಂಡ ಸಿ. ಕಾಳಪ್ಪ, ಖಜಾಂಚಿಯಾಗಿ ಮಚ್ಚಂಡ ಜಿ. ಬೋಪಣ್ಣ ಕಾರ್ಯನಿರ್ವಹಿಸುತ್ತಿದ್ದಾರೆ ಎಂದೂ ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾದಾಪುರ ಕೊಡವ ಸಮಾಜದ ಗೌರವ ಕಾರ್ಯದರ್ಶಿ ಐಚೆಟ್ಟಿರ ನಂಜಪ್ಪ, ನಿರ್ದೇಶಕರಾದ ನಾಪಂಡ ಉಮೇಶ್ ಉತ್ತಪ್ಪ, ಮಾಳೆಯಂಡ ಜೋಯಪ್ಪ ಉಪಸ್ಥಿತರಿದ್ದರು.