ಕೋವರ್ಕೊಲ್ಲಿ ಇಂದ್ರೇಶ್
ಬೆAಗಳೂರು, ಮೇ ೪: ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರ (ಡಿಜಿಪಿ ಮತ್ತು ಐಜಿಪಿ) ಕಚೇರಿಯು ರಾಜ್ಯಾದ್ಯಂತ ಇರುವ ಪೊಲೀಸ್ ಠಾಣೆಗಳು ಮತ್ತು ರೈಲ್ವೇ ಪೊಲೀಸ್ ಠಾಣೆಗಳಿಗೆ ಈ ಸುತ್ತೋಲೆಯೊಂದನ್ನು ಹೊರಡಿಸಿದೆ.
ರೈಲ್ವೆ ಸೇರಿದಂತೆ ರಾಜ್ಯದ ಎಲ್ಲಾ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹೊರಡಿಸಿರುವ ಈ ಸುತ್ತೋಲೆಯಲ್ಲಿ ಇಲಾಖೆಯು ಸೂರ್ಯಾಸ್ತದ ನಂತರ ಮತ್ತು ಸೂರ್ಯೋದಯಕ್ಕೂ ಯಾವುದೇ ವಿಚಾರಣೆ ಅಥವಾ ತನಿಖೆಗಾಗಿ ಮಹಿಳೆಯರನ್ನು ಪೊಲೀಸ್ ಠಾಣೆಗಳಿಗೆ ಕರೆಸಬಾರದು ಎಂದು ಹೇಳಿದೆ. ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಆದೇಶದ ಮೇರೆಗೆ ಈ ಸುತ್ತೋಲೆಯನ್ನು ಹೊರಡಿಸಲಾಗಿದೆ. ಆಯೋಗವು ರಾತ್ರಿಯಲ್ಲಿ ಮಹಿಳೆಯರನ್ನು ಕರೆಸುವುದು ಸೂಕ್ತವಲ್ಲ ಇದು ಅವರ ಸುರಕ್ಷತೆ ಮತ್ತು ಹಕ್ಕುಗಳ ಬಗ್ಗೆ ಗಂಭೀರ ಕಳವಳಗಳನ್ನು ಉಂಟುಮಾಡುತ್ತದೆ ಎಂದು ತಿಳಿಸಿದ ಹಿನ್ನೆಲೆಯಲ್ಲಿ ಈ ಸುತ್ತೋಲೆ ಹೊರಡಿಸಲಾಗಿದೆ.
ಆದರೆ ಗಂಭೀರ ಪ್ರಕರಣಗಳಲ್ಲಿ ರಾತ್ರಿಯಲ್ಲಿ ಮಹಿಳೆಯರನ್ನು ಪ್ರಶ್ನಿಸುವುದು ಅಗತ್ಯವಾದಾಗ ಅನಿವಾರ್ಯ ಅಥವಾ ತುರ್ತು ಸಂದರ್ಭಗಳಲ್ಲಿ, ಮಹಿಳಾ ಪೊಲೀಸ್ ಅಧಿಕಾರಿಯ ಉಪಸ್ಥಿತಿ ಕಡ್ಡಾಯವಾಗಿದೆ ಎಂದು ಸುತ್ತೋಲೆ ಸ್ಪಷ್ಟಪಡಿಸಿದೆ. ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜುಲೈ ೨೦೨೪ ರಲ್ಲಿ ವರದಿಯಾದ ಪ್ರಕರಣದಲ್ಲಿ ತನ್ನ ನೆರೆಹೊರೆಯವರೊಂದಿಗೆ ವಿವಾದದಲ್ಲಿ ಸಿಲುಕಿದ ಮಹಿಳೆಯೊಬ್ಬರನ್ನು ತಡ ರಾತ್ರಿಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಪೊಲೀಸ್ ಠಾಣೆಯಲ್ಲಿ ಕೂರಿಸಿಕೊಳ್ಳಲಾಗಿತ್ತು ಎಂದು ಆರೋಪಿಸಿ ಆ ಮಹಿಳೆ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿ ಪೊಲೀಸ್ ಅಧಿಕಾರಿ ವಿರುದ್ದ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದರು.
ಇದಕ್ಕೆ ಉತ್ತರಿಸಿದ ಪೊಲೀಸರು ದೂರುದಾರ ಮತ್ತು ಪ್ರತಿ-ದೂರುದಾರ ಇಬ್ಬರನ್ನೂ ವೈದ್ಯಕೀಯ ಪರೀಕ್ಷೆ ಸೇರಿದಂತೆ ಕಾರ್ಯವಿಧಾನದ ಅವಶ್ಯಕತೆಗಳ ಭಾಗವಾಗಿ ಸಮನ್ಸ್ ನೀಡಿ ಕರೆಸಲಾಗಿತ್ತು ಮತ್ತು ವಿವಾದ ಉಲ್ಬಣಗೊಳ್ಳುವುದನ್ನು ತಡೆಯುವ ಉದ್ದೇಶದಿಂದಷ್ಟೇ ಕರೆಸಲಾಗಿತ್ತು ಎಂದು ತಿಳಿಸಿದ್ದರು. ಆದರೆ ದೂರುದಾರ ಮಹಿಳೆ ಇದನ್ನು ವಿರೋಧಿಸಿ, ರಾತ್ರಿಯಲ್ಲಿ ಪೊಲೀಸ್ ಠಾಣೆಗೆ ಕರೆತರುವ ಬದಲು ನೇರವಾಗಿ ಆಸ್ಪತ್ರೆಗೆ ಕರೆದೊಯ್ಯಬಹುದಿತ್ತು ಎಂದು ವಾದಿಸಿದ್ದರು.
ರಾಜ್ಯ ಮಾನವ ಹಕ್ಕುಗಳ ಆಯೋಗವು ಈ ಕುರಿತು ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆಯನ್ನು ನೀಡಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಮತ್ತು ರಾಜ್ಯಾದ್ಯಂತ ಏಕರೂಪದ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಸೂಚಿಸಿತ್ತು. ಆ ಸೂಚನೆಯ ಮೇರೆಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕುಂದುಕೊರತೆ ಮತ್ತು ಮಾನವ ಹಕ್ಕುಗಳು) ದೇವ ಜ್ಯೋತಿ ರೇ ಅವರು ಮೊನ್ನೆ ಸುತ್ತೋಲೆಯನ್ನು ಹೊರಡಿಸಿದ್ದು ಎಲ್ಲಾ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳೂ ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಆದೇಶಿಸಿದ್ದಾರೆ.