ಮಡಿಕೇರಿ, ಮೇ ೮: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದು, ಈ ದಿಸೆಯಲ್ಲಿ ಗ್ರಾ.ಪಂ.ಗಳಿಗೆ ಸರ್ಕಾರ ಹೆಚ್ಚಿನ ಅಧಿಕಾರ ನೀಡಿದ್ದು, ಅದನ್ನು ನಿಯಮಾನುಸಾರ ಬಳಸುವಂತಾಗಬೇಕು ಎಂದು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಹೇಳಿದರು.

ಹೊದ್ದೂರು ಗ್ರಾ.ಪಂ. ಸಭಾಂಗಣದಲ್ಲಿ ೨೦೨೬-೨೭ನೇ ಸಾಲಿನ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆ ತಯಾರಿ ಬಗ್ಗೆ ಮಾಹಿತಿ ಪಡೆದು ಅವರು ಮಾತನಾಡಿದರು. ಗ್ರಾ.ಪಂ. ಅಭಿವೃದ್ಧಿಗೆ ಕಾನೂನಿನ ಅಧಿಕಾರ ಚಲಾಯಿಸಬೇಕು. ಸಂವಿಧಾನದ ಆಶಯದಂತೆ ನಡೆದುಕೊಳ್ಳಬೇಕು. ಪಂಚಾಯತ್ ರಾಜ್ ವ್ಯವಸ್ಥೆ ಬಲಿಷ್ಠವಾಗಿರಬೇಕು. ಆ ಮೂಲಕ ಗ್ರಾಮಗಳ ಅಭಿವೃದ್ಧಿ ಆಗಬೇಕು ಎಂದು ಹೇಳಿದರು.

ಜನರ ಪ್ರತಿನಿಧಿಗಳು ಜನರೇ ಆಗಿದ್ದಾರೆ. ಸ್ಥಳೀಯವಾಗಿಯೇ ಶಾಲೆ, ಆಸ್ಪತ್ರೆ, ಅಂಗನವಾಡಿ ಮತ್ತಿತರ ಅಗತ್ಯ ಹುದ್ದೆಗಳ ನೇಮಕವೂ ಆಗಬೇಕು. ಕಾನೂನಿನ ಅಧಿಕಾರ ಹಸ್ತಾಂತರ ಆಗಬೇಕು. ಗ್ರಾಮಸಭೆಯ ನಿರ್ಣಯವೇ ಅಂತಿಮ ಆಗಬೇಕು. ಗ್ರಾಮ ಅಭಿವೃದ್ಧಿಗೆ ಸ್ಥಳೀಯರೇ ಚಿಂತಿಸಬೇಕು. ಗ್ರಾಮ ಪಂಚಾಯಿತಿ ವ್ಯವಸ್ಥೆಯಲ್ಲಿ ಪಕ್ಷ ರಾಜಕಾರಣ ಇರುವುದಿಲ್ಲ. ಗ್ರಾಮಸ್ಥರೇ ಎಲ್ಲಾ ಬಡಜನರ ಏಳಿಗೆಯನ್ನು ಬಯಸಿ ಒಮ್ಮತದ ತೀರ್ಮಾನ ತೆಗೆದುಕೊಳ್ಳಬಹುದಾಗಿದೆ ಎಂದರು.

ಗ್ರಾ.ಪಂ.ಗಳಿಗೆ ಇರುವ ಅಧಿಕಾರ ಮತ್ತು ಕಾನೂನಿನ ಬಗ್ಗೆ ಕೈಪಿಡಿ ಮುದ್ರಿಸಿ ನೀಡುವಂತಾಗಬೇಕು. ಮಹಾತ್ಮ ಗಾಂಧಿಯವರ ಕನಸಿನ ರಾಮರಾಜ್ಯ ಮತ್ತು ರಾಜೀವ್ ಗಾಂಧಿ ಅವರ ಗ್ರಾಮೀಣಾಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಆಧುನಿಕ ತಂತ್ರಜ್ಞಾನದ ಆಶಯದೊಂದಿಗೆ ಗ್ರಾಮಗಳ ಅಭಿವೃದ್ಧಿ ಮತ್ತಷ್ಟು ಆಗಬೇಕು ಎಂದು ಒತ್ತಿ ಹೇಳಿದರು.

ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ವಿಶೇಷ ಸಲಹೆಗಾರ ಕೆಂಪೇಗೌಡ ಮಾತನಾಡಿ, ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಚುನಾಯಿತ ಸರ್ಕಾರ ಇರಬೇಕು ಎಂಬುದು ಸರ್ಕಾರದ ಆಶಯವಾಗಿದ್ದು, ಈ ನಿಟ್ಟಿನಲ್ಲಿ ಸ್ಥಳೀಯ ಆಡಳಿತಕ್ಕೆ ವಿಶೇಷವಾದ ಅಧಿಕಾರ ನೀಡಲಾಗಿದೆ. ಜನರ ನಿರೀಕ್ಷೆಗೆ ತಕ್ಕಂತೆ ಅಧಿಕಾರ ನಡೆಸಬೇಕು. ಪಂಚಾಯಿತಿ ಅಭಿವೃದ್ಧಿಗೆ ಸಂಬAಧಿಸಿದAತೆ ಎಲ್ಲಾ ಮತದಾರರಿಗೂ ಮಾಹಿತಿ ನೀಡಬೇಕು. ಫಲಾನುಭವಿಗಳ ಆಯ್ಕೆ ಮತ್ತು ಕ್ರಿಯಾ ಯೋಜನೆ ರೂಪಿಸುವುದು ಹಾಗೂ ವಾರ್ಡ್ ಸಭೆ ನಡೆಸುವುದು ಸೇರಿದಂತೆ ಪಂಚಾಯತ್ ರಾಜ್ ಆಶಯವನ್ನು ಅರಿತುಕೊಂಡು ಕೆಲಸ ಮಾಡಬೇಕು ಎಂದರು. ೨೦೨೭-೨೮ನೇ ಸಾಲಿನಲ್ಲಿ ಜನರ ಯೋಜನೆಯಾಗಿ ರೂಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಂತನೆ ನಡೆಸಿದ್ದು, ಅದರಂತೆ ಜನರ ಭಾಗವಹಿಸುವಿಕೆ ಅತಿಮುಖ್ಯ ಎಂದು ಕೆಂಪೇಗೌಡ ವಿವರಿಸಿದರು. ಗ್ರಾ.ಪಂ. ನಿಕಟಪೂರ್ವ ಸದಸ್ಯ ಮೊಣ್ಣಪ್ಪ ಮಾತನಾಡಿ, ಗ್ರಾ.ಪಂ.ಗಳಿಗೆ ಅನುದಾನ ಹೆಚ್ಚಿಸಬೇಕು ಎಂದು ಕೋರಿದರು.

ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಹಂಸ ಮಾತನಾಡಿ, ಗ್ರಾಮೀಣ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಸ್ಥಳೀಯ ಆಡಳಿತ ಸಮನ್ವಯತೆ ಮತ್ತು ದೂರದೃಷ್ಟಿಯಿಂದ ಕಾರ್ಯ ನಿರ್ವಹಣೆ ಅಗತ್ಯ ಎಂದರು.

ಸ್ಥಳೀಯರೊಬ್ಬರು ಮಾತನಾಡಿ, ವಸತಿ ಯೋಜನೆಯಡಿ ಸರ್ಕಾರದಿಂದ ನೀಡುವ ಅನುದಾನ ಸಾಲುವುದಿಲ್ಲ, ರೂ. ೫ ಲಕ್ಷದವರೆಗೆ ಹೆಚ್ಚಿಸಬೇಕು ಎಂದು ಕೋರಿದರು. ಗ್ರಾ.ಪಂ. ಮಾಜಿ ಸದಸ್ಯರಾದ ಕುಸುಮಾವತಿ, ಹಮೀದ್, ಲಕ್ಷಿö್ಮ, ಜಿ.ಪಂ. ಸಹಾಯಕ ಕಾರ್ಯದರ್ಶಿ ಅಬ್ದುಲ್ ನಬಿ, ತಾ.ಪಂ. ಇಓ ಶೇಖರ್, ಆಡಳಿತಾಧಿಕಾರಿ ಪಿ.ಪಿ. ಕವಿತಾ, ಪಿಡಿಓ ವತ್ಸಲಾ, ಅಬ್ದುಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ಸ್ಥಳೀಯರು ಇದ್ದರು.