ನಾಪೋಕ್ಲು, ಮೇ ೯: ಹಿರಿಯರನ್ನು, ಪೋಷಕರನ್ನು ಕಡೆಗಣಿಸಬಾರದು. ಹಿರಿಯರ ಆಶೀರ್ವಾದವೇ ನಮಗೆ ಶ್ರೀರಕ್ಷೆ ಎಂದು ಒಲಂಪಿಯನ್ ಬಾಳೆಯಡ ಸುಬ್ರಮಣಿ ಹೇಳಿದರು.

ಇಲ್ಲಿಗೆ ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ನಾಲ್ನಾಡ್ ಹಾಕಿ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಹಾಕಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿದ್ಯಾರ್ಥಿಗಳ ಜೀವನ ಅಮೂಲ್ಯವಾದದು. ಇಂತಹ ಸಮಯ ಮತ್ತೆ ಸಿಗದು. ಸಮಯದ ಸದ್ಬಳಕೆಯನ್ನು ವಿದ್ಯಾರ್ಥಿಗಳು ಮಾಡಿಕೊಳ್ಳಬೇಕಿದೆ. ಶಿಬಿರವಿದ್ದಾಗ ಮಾತ್ರ ತರಬೇತಿ ಪಡೆದುಕೊಂಡು ಮೈದಾನವನ್ನು ಬಳಕೆ ಮಾಡುವುದಲ್ಲ. ಸಮಯ ಸಿಕ್ಕಾಗಲೆಲ್ಲಾ ಆಟದ ಮೈದಾನಗಳ ಸದುಪಯೋಗ ಪಡೆದುಕೊಳ್ಳಬೇಕು, ಕ್ರೀಡೆಯಲ್ಲಿ ಮುಂದುವರಿಯಬೇಕು ಎಂದರು.

ಹಾಕಿ ವೀಕ್ಷಕ ವಿವರಣೆಗಾರ ಮಾಳೇಟಿರ ಶ್ರೀನಿವಾಸ್ ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್‌ನಿಂದ ದೂರವಿರಬೇಕು. ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಬೇಕು. ನಿತ್ಯವೂ ತರಬೇತಿ ಪಡೆದರೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಬೆಳೆಯಲು ಸಾಧ್ಯ ಎಂದರು.

ನಾಲ್ನಾಡ್ ಹಾಕಿ ಕ್ಲಬ್ ವತಿಯಿಂದ ಒಂದು ತಿಂಗಳ ಕಾಲ ಆಯೋಜಿಸಲಾಗಿದ್ದ ಹಾಕಿ ತರಬೇತಿ ಶಿಬಿರದಲ್ಲಿ ೮೦ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶಿಬಿರದಲ್ಲಿ ಪಾಲ್ಗೊಂಡಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಅತಿಥಿಗಳು ಪ್ರಮಾಣ ಪತ್ರ ವಿತರಿಸಿದರು. ಹಾಕಿ ಕ್ಲಬ್ ಅಧ್ಯಕ್ಷ ಕರವಂಡ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು.

ತರಬೇತಿದಾರರಾದ ಅಂಜಪರವAಡ ರೋಶನ್ ಮಾದಪ್ಪ, ಮುಕ್ಕಾಟಿರ ಮುತ್ತಪ್ಪ, ಅಪ್ಪಚೆಟ್ಟೋಳಂಡ ಅಯ್ಯಪ್ಪ, ಅಪ್ಪಚ್ಚಿರ ಪಳಂಗಪ್ಪ, ಕೇಟೋಳಿರ ಡಾಲಿ ಅಚ್ಚಪ್ಪ, ಹಿರಿಯರಾದ ಕೇಟೋಳಿರ ಡಾಲಿ, ಹಾಕಿ ಕ್ಲಬ್ ಸಂಚಾಲಕ ಮನು ಮುತ್ತಪ್ಪ , ಉಪಾಧ್ಯಕ್ಷ ಕೈಬುಲಿರ ಉಮೇಶ್, ಗೌರವ ಕಾರ್ಯದರ್ಶಿ ಚಂಗೆಟ್ಟರ ಕುಮಾರ ಸೋಮಣ್ಣ, ಖಜಾಂಚಿ ಮಚ್ಚುರ ಯದುಕುಮಾರ್, ನಿರ್ದೇಶಕರು, ಪ್ರಮುಖರು ಹಾಗೂ ಪೋಷಕರು ಪಾಲ್ಗೊಂಡಿದ್ದರು.