ಮಡಿಕೇರಿ, ಮೇ ೧೦: ಕೊಡಗು ಗೌಡ ಯುವ ವೇದಿಕೆ ವತಿಯಿಂದ ೧೦ ಕುಟುಂಬ ೧೮ ಗೋತ್ರದ ಗೌಡ ಕುಟುಂಬಗಳ ನಡುವೆ ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಟುಂಬ-೨೦೨೬ ಕ್ರಿಕೆಟ್ ಪಂದ್ಯಾಟದಲ್ಲಿ ಬೊಳ್ಳುಮಾನಿ, ಹುಲಿಮನೆ, ತೆಕ್ಕಡೆ, ಪರ್ಲಕೋಟಿ ತಂಡಗಳು ಪ್ರಿ ಕ್ವಾರ್ಟರ್ ಪ್ರವೇಶಿಸಿದ್ದು, ಬಾಲಂಬಿ, ಕೈಬಿಲಿ ತಂಡಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆದುಕೊಂಡಿವೆ.

ಎಳ್ಮೆಕಾಲು ವಿರುದ್ಧ ಕುಂಡ್ಯನ ಜಯ ಸಾಧಿಸಿತು. ಎಳ್ಮೆಕಾಲು ನಿಗದಿತ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ಕೇವಲ ೧೬ ರನ್ ಬಾರಿಸಿತು. ಗುರಿ ಬೆನ್ನತ್ತಿದ ಕುಂಡ್ಯನ ೧.೫ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೧೮ ರನ್ ಬಾರಿಸಿ ಗೆಲುವು ಪಡೆಯಿತು. ಮೆಡ್ತನ ವಿರುದ್ಧ ಕೈಬಿಲಿ ೮ ವಿಕೆಟ್‌ಗಳ ಜಯ ಸಾಧಿಸಿತು. ಮೇಡ್ತನ ೩ ವಿಕೆಟ್ ನಷ್ಟಕ್ಕೆ ೫೦ ರನ್ ಕಲೆಹಾಕಿತು. ಕೈಬಿಲಿ ೩.೫ ಓವರ್‌ಗಳಲ್ಲಿ ೨ ವಿಕೆಟ್ ನಷ್ಟಕ್ಕೆ ೫೧ ರನ್ ಬಾರಿಸಿ ಗೆಲುವಿನ ನಗೆಬೀರಿತು. ಕುಂಡ್ಯನ ಹಾಗೂ ಪೂಜಾರಿರ (ಬಿ) ನಡುವಿನ ಪಂದ್ಯದಲ್ಲಿ ಪೂಜಾರಿರ (ಬಿ) ಗೆಲುವು ಪಡೆಯಿತು. ಕುಂಡ್ಯನ ೪ ವಿಕೆಟ್ ನಷ್ಟಕ್ಕೆ ೩೨ ರನ್ ದಾಖಲಿಸಿತು. ಪೂಜಾರಿರ (ಬಿ) ೨.೫ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೩೭ ರನ್ ಬಾರಿಸಿ ಗೆಲುವು ಪಡೆಯಿತು. ಕೇಟೋಳಿ ವಿರುದ್ಧ ಪೆರ್ಲಕೋಟಿ ೩೨ ರನ್‌ಗಳ ಜಯ ಗಳಿಸಿತು. ಪರ್ಲಕೋಟಿ ಯಾವುದೇ ವಿಕೆಟ್ ನಷ್ಟವಿಲ್ಲದೆ ೭೨ ರನ್ ಕಲೆ ಹಾಕಿತು. ಕೇಟೋಳಿ ೫ ವಿಕೆಟ್ ನಷ್ಟಕ್ಕೆ ೪೦ ರನ್ ಸಂಪಾದಿಸಿ ಸೋಲನುಭವಿಸಿತು. ಪರ್ಲಕೋಟಿ ದರ್ಶನ್ ೫ ಸಿಕ್ಸರ್ ಸಹಿತ ೨೬ ಎಸೆತಕ್ಕೆ ಅಜೇಯ ೬೨ ರನ್ ದಾಖಲಿಸಿ ಗಮನ ಸೆಳೆದರು. ಹೊಸಮನೆ ಹಾಗೂ ಕುದುಕುಳಿ (ಎ) ನಡುವಿನ ಪಂದ್ಯದಲ್ಲಿ ಉಭಯ ತಂಡಗಳು ೪೩ ರನ್ ಬಾರಿಸಿ ಡ್ರಾ ಫಲಿತಾಂಶ ಬಂದ ಹಿನ್ನೆಲೆ ಸೂಪರ್ ಓವರ್ ಮೊರೆ ಹೋಗಲಾಯಿತು. ಸೂಪರ್ ಓವರ್‌ನಲ್ಲಿ ಹೊಸಮನೆ ೧ ವಿಕೆಟ್ ನಷ್ಟಕ್ಕೆ ೨ ರನ್ ಮಾತ್ರ ಬಾರಿಸಿತು. ಕುದುಕುಳಿ (ಎ) ೨ ವಿಕೆಟ್ ಕಳೆದುಕೊಂಡು ೧೧ ರನ್ ಬಾರಿಸಿ ಜಯ ಪಡೆಯಿತು. ಬಾಲಂಬಿ ವಿರುದ್ಧ ಕೊಲ್ಯದ ಸೋಲಿಗೊಳಗಾಯಿತು. ಬಾಲಂಬಿ ೧ ವಿಕೆಟ್ ನಷ್ಟಕ್ಕೆ ೮೯ ರನ್ ಕಲೆಹಾಕಿತು. ಕೊಲ್ಯದ ೪ ವಿಕೆಟ್ ನಷ್ಟಕ್ಕೆ ೪೮ ರನ್ ಬಾರಿಸಿ ಸೋಲನುಭವಿಸಿತು. ಬಾಲಂಬಿ ಪರ ಯಕ್ಷಿತ್ ೭ ಸಿಕ್ಸರ್ ಸಹಿತ ೨೦ ಎಸೆತದಲ್ಲಿ ಅಜೇಯ ೫೬ ರನ್ ಸಿಡಿಸಿ ಮಿಂಚಿದರು. ಮುಕ್ಕಾಟಿ (ಕಡಿಯತ್ತೂರು) ವಿರುದ್ಧ ಬೊಳ್ಳುಮಾನಿ ಜಯ ಸಾಧಿಸಿತು. ಮುಕ್ಕಾಟಿ ೫ ವಿಕೆಟ್ ನಷ್ಟಕ್ಕೆ ೨೯ ರನ್ ಕಲೆಹಾಕಿತು. ಬೊಳ್ಳುಮಾನಿ ೧.೩ ಓವರ್‌ಗಳಲ್ಲಿ ೩೫ ರನ್ ಬಾರಿಸಿ ಗೆಲುವು ದಾಖಲಿಸಿತು. ಪೊನ್ನಚ್ಚನ ಹಾಗೂ ಹುಲಿಮನೆ ನಡುವಿನ ಪಂದ್ಯದಲ್ಲಿ ಹುಲಿಮನೆ ಸೂಪರ್ ಓವರ್‌ನಲ್ಲಿ ಗೆಲುವು ಪಡೆಯಿತು. ಉಭಯ ತಂಡಗಳು ಪಂದ್ಯದ ಅವಧಿಯಲ್ಲಿ ೫೮ ರನ್ ಬಾರಿಸಿದವು. ಈ ಹಿನ್ನೆಲೆ ಸೂಪರ್ ಓವರ್ ಪಂದ್ಯ ನಡೆದು ಪೊನ್ನಚ್ಚನ ೧೫ ರನ್ ಬಾರಿಸಿದರೆ, ಹುಲಿಮನೆ ೧೮ ರನ್ ಕಲೆ ಹಾಕಿ ಗೆಲುವು ತನ್ನದಾಗಿಸಿಕೊಂಡಿತು. ಕುದುಕುಳಿ (ಎ) ವಿರುದ್ಧ ಕೈಬಿಲಿ ಜಯಗಳಿಸಿತು. ಕುದುಕುಳಿ (ಎ) ೫ ವಿಕೆಟ್ ನಷ್ಟಕ್ಕೆ ೫೫ ರನ್ ಬಾರಿಸಿದರೆ, ಕೈಬಿಲಿ ೩ ವಿಕೆಟ್ ನಷ್ಟಕ್ಕೆ ೫೯ ರನ್ ಗಳಿಸಿ ಗೆಲುವು ದಾಖಲಿಸಿತು. ಕೊಳಂಬೆ ತಂಡವನ್ನು ಪೂಜಾರಿರ (ಬಿ) ಮಣಿಸಿತು. ಕೊಳಂಬೆ ೨ ವಿಕೆಟ್ ನಷ್ಟಕ್ಕೆ ೪೩ ರನ್ ದಾಖಲಿಸಿದರೆ, ಪೂಜಾರಿರ (ಬಿ) ೨ ಓವರ್‌ಗಳಲ್ಲಿ ೧ ವಿಕೆಟ್ ನಷ್ಟಕ್ಕೆ ೪೪ ರನ್ ದಾಖಲಿಸಿ ಗೆಲುವು ಪಡೆಯಿತು. ಕರ್ಣಯ್ಯನ ವಿರುದ್ಧ ಪರ್ಲಕೋಟಿ ಭರ್ಜರಿ ಜಯ ಗಳಿಸಿತು. ಪರ್ಲಕೋಟಿ ೩ ವಿಕೆಟ್ ನಷ್ಟಕ್ಕೆ ೬೧ ರನ್ ದಾಖಲಿಸಿತು. ಕರ್ಣಯ್ಯನ ೭ ವಿಕೆಟ್ ನಷ್ಟಕ್ಕೆ ಕೇವಲ ೧೭ ರನ್ ದಾಖಲಿಸಿ ಸೋಲನುಭವಿಸಿತು. ಹೊಸೂರು ವಿರುದ್ಧ ಬಾಲಂಬಿ ತಂಡ ಅಮೋಘ ೫೬ ರನ್‌ಗಳ ಅಂತರದ ಜಯ ಪಡೆಯಿತು. ಬಾಲಂಬಿ ೩ ವಿಕೆಟ್ ನಷ್ಟಕ್ಕೆ ೮೦ ರನ್ ಕಲೆ ಹಾಕಿತು. ಹೊಸೂರು ತಂಡ ೬ ವಿಕೆಟ್ ನಷ್ಟಕ್ಕೆ ಕೇವಲ ೨೪ ರನ್ ಗಳಿಸಿ ಸೋಲನುಭವಿಸಿತು. ತೆಕ್ಕಡೆ ಹಾಗೂ ಪೂಜಾರಿರ (ಬಿ) ನಡುವಿನ ಪಂದ್ಯದಲ್ಲಿ ತೆಕ್ಕಡೆ ಜಯಗಳಿಸಿತು. ತೆಕ್ಕಡೆ ೩ ವಿಕೆಟ್ ನಷ್ಟಕ್ಕೆ ೬೬ ರನ್ ದಾಖಲಿಸಿದರೆ, ಪೂಜಾರಿರ (ಬಿ) ೫ ವಿಕೆಟ್ ನಷ್ಟಕ್ಕೆ ೫೨ ರನ್ ದಾಖಲಿಸಿ ಸೋಲು ಕಂಡಿತು. ಉಡುದೋಳಿ ವಿರುದ್ಧ ಪರ್ಲಕೋಟಿ ೨೯ ರನ್‌ಗಳ ಜಯ ಗಳಿಸಿತು. ಪರ್ಲಕೋಟಿ ೩ ವಿಕೆಟ್ ನಷ್ಟಕ್ಕೆ ೭೪ ರನ್ ಬಾರಿಸಿತು. ಉಡುದೋಳಿ ೫ ವಿಕೆಟ್ ನಷ್ಟಕ್ಕೆ ೪೫ ರನ್ ಸಂಪಾದಿಸಿ ಸೋಲನುಭವಿಸಿತು.