ವೀರಾಜಪೇಟೆ, ಮೇ ೧೦: ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ವತಿಯಿಂದ ವಿಶ್ವ ರೆಡ್‌ಕ್ರಾಸ್ ದಿನಾಚರಣೆಯನ್ನು ಆಚರಿಸಲಾಯಿತು.

ವಿಶ್ವ ರೆಡ್‌ಕ್ರಾಸ್ ದಿನಾಚರಣೆಯ ಪ್ರಯುಕ್ತ ಈ ಬಾರಿಯ ಧ್ಯೇಯ ವಾಕ್ಯವಾದ ‘ಮಾನವೀಯತೆಯಲ್ಲಿ ಏಕತೆ’ ಎಂಬ ವಿಚಾರದ ಕುರಿತು ಕಾಲೇಜಿನ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಈ ಬಾರಿ ಮಾನವೀಯತೆಯಲ್ಲಿ ಏಕತೆ ಎಂಬ ತತ್ವದಡಿಯಲ್ಲಿ ವಿಶ್ವ ರೆಡ್‌ಕ್ರಾಸ್ ದಿನಾಚರಣೆಯನ್ನು ಆಚರಿಸುತ್ತಿದ್ದು ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ಆರೋಗ್ಯದ ಜಾಗೃತಿ ರೆಡ್‌ಕ್ರಾಸ್‌ನ ಪ್ರಮುಖ ಉದ್ದೇಶವಾಗಿದ್ದು ಆರೋಗ್ಯವಂತ ಸಮಾಜವನ್ನು ನಿರ್ಮಿಸಲು ಸ್ವಯಂ ಸೇವಕರ ಪಾತ್ರ ಅಪಾರವಾಗಿದೆ ಎಂದರು. ತುರ್ತು ಸಂದರ್ಭದಲ್ಲಿ ದೇಶಾದ್ಯಂತ ರೆಡ್‌ಕ್ರಾಸ್ ಘಟಕದ ಸ್ವಯಂ ಸೇವಕರ ಸಾಮಾಜಿಕ ಕೊಡುಗೆಗಳನ್ನು ಸ್ಮರಿಸಿದರು.

ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದ ಅಧಿಕಾರಿ ವಿಲೀನ ಗೋನ್ಸಾಲ್ವೆಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯಲ್ಲಿ ರೆಡ್‌ಕ್ರಾಸ್ ಘಟಕದ ವತಿಯಿಂದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದ್ದು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಆರೋಗ್ಯ ಜಾಗೃತಿಯನ್ನು ಮೂಡಿಸಿ ಅವರಿಂದ ಸಮಾಜದ ಜಾಗೃತಿಗೆ ಪ್ರೇರೇಪಣೆಯನ್ನು ನೀಡಲಾಗುತ್ತಿದೆ. ಸ್ವಯಂ ಸೇವಕರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದು ರೆಡ್‌ಕ್ರಾಸ್‌ನ ಆಶಯದಂತೆ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದರು.

ಈ ಸಂದರ್ಭ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹೇಮ ಬಿ.ಡಿ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿಶ್ವ ರೆಡ್‌ಕ್ರಾಸ್ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ಚಿತ್ರಕಲಾ ಸ್ಪರ್ಧೆಯಲ್ಲಿ ದ್ವಿತೀಯ ಬಿಸಿಎ (ಜನರಲ್)ತರಗತಿಯ ಅಂಜಿತ ಆರ್.ಯು. ಪ್ರಥಮ ಸ್ಥಾನ, ಪ್ರಥಮ ಬಿಸಿಎ (ಎಐಎಂಎಲ್) ನ ಅನ್ಫಾಸ್ ಕೆ.ಬಿ ದ್ವಿತೀಯ ಸ್ಥಾನ ಹಾಗೂ ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ವೈಶಾಲಿ ಎಸ್ ತೃತೀಯ ಸ್ಥಾನವನ್ನು ಪಡೆದುಕೊಂಡರು.