ವೀರಾಜಪೇಟೆ, ಮೇ ೧೦: ಕೊಡಗಿನಲ್ಲಿ ಹಲವಾರು ವರ್ಷಗಳಿಂದಲೂ ತೋಟದ ಲೈನ್ ಮನೆಯಲ್ಲಿ ಮತ್ತು ಬಾಡಿಗೆ ಮನೆಯಲ್ಲಿ ವಾಸವಿರುವ ಕಾರ್ಮಿಕ ಕುಟುಂಬಗಳಿಗೆ ಸರಕಾರ ೫ ಎಕರೆಯಂತೆ ಜಾಗ ಮತ್ತು ಮೂಲ ಸೌಲಭ್ಯಗಳನ್ನು ನೀಡುವಂತಾಗಬೇಕು ಎಂದು ಎ.ಐ.ಸಿ.ಸಿ.ಟಿ.ಯು ಸಂಘಟನೆಯ ಕೇಂದ್ರ ಉಪಾಧ್ಯಕ್ಷ ಕ್ಲಿಫ್ಟನ್ ಡಿ. ರೋಜಾರಿಯೊ ಒತ್ತಾಯಿಸಿದರು.

ಕಾರ್ಮಿಕ ದಿನಾಚರಣೆ ಅಂಗವಾಗಿ ಎ.ಐ.ಸಿ.ಸಿ.ಟಿ.ಯು ಸಂಘಟನೆ ವತಿಯಿಂದ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಜಗತ್ತಿನ ಎಲ್ಲಾ ದೇಶಗಳಲ್ಲಿ ದುಡಿಯುವ ಜನರು ಆಚರಿಸುವ ಮೇ ೧ ಹೆಮ್ಮೆಯ ದಿನವಾಗಿದೆ. ಇಂದಿನ ದಿನದಲ್ಲಿ ಪವಿತ್ರ ಸೇವೆಯ ಹೆಸರಿನಲ್ಲಿ ಭ್ರಷ್ಟಚಾರ ನಡೆಯುತ್ತಿದೆ. ಹಲವಾರು ಕಾಯಿದೆಗಳು ಬಂದರು ಇಂದು ಅಸಮಾನತೆ, ತಾರತಮ್ಯಗಳು ಜೀವಂತವಾಗಿ ಉಳಿದುಕೊಂಡಿವೆ. ಮುಂದಿನ ದಿನಗಳÀಲ್ಲಿ ಕಾರ್ಮಿಕ ಸಂಘಟನೆ ಮೂಲಕ ಹೋರಾಟ ಅನಿವಾರ್ಯವಿರುವುದಾಗಿ ಹೇಳಿದರು.

ಸಂಘಟನೆಯ ಮಂಗಳೂರಿನ ರಮಣ ವಿಠಲ ಅವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಹಿಂದೆ ಸ್ವಾತಂತ್ರö್ಯ ಚಳುವಳಿಯ ಸಂದರ್ಭ ಹೋರಾಟದಲ್ಲಿ ಭಾಗವಹಿಸಿದ್ದವರು ಹೆಚ್ಚು ಬಡ ಕಾರ್ಮಿಕರೆ. ಡಾ. ಬಿ.ಆರ್. ಅಂಬೇಡ್ಕರ್ ತಂದಿರುವ ಕಾನೂನನ್ನು ಪಾಲನೆ ಮಾಡುತ್ತಿರುವರು ಹೆಚ್ಚಾಗಿ ಕಾರ್ಮಿಕರುಗಳು. ಕೇಂದ್ರ ಸರಕಾರದ ಪ್ರಧಾನಮಂತ್ರಿ ಅವರು ಉಳ್ಳವರಿಗೆ ಅನುಕೂಲವಾಗುವಂತ ಯೋಜನೆಗಳನ್ನು ರೂಪಿಸಿದ್ದರೆ, ಕಾರ್ಮಿಕ ವರ್ಗಕ್ಕೆ ಸರಿಯಾಗಿ ಸೌಲಭ್ಯಗಳು ದೊರಕುತ್ತಿಲ್ಲ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಘಟನೆಯ ಜಿಲ್ಲಾಧ್ಯಕ್ಷ ಎಂ.ಕೆ.ಮೋಹನ್ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಸಂಘಟನೆಯ ತಾಲೂಕು ಸಮಿತಿಯ ಗೌರಿ, ರವಿ, ಚುಬ್ಬಾ, ಅಪ್ಪಣ್ಣ, ತೋಲ, ಮತ್ತಿತರರು ಉಪಸ್ಥಿತರಿದ್ದರು.

ತಾಲೂಕಿನ ಇತರೆಡೆಗಳಿಂದಲೂ ಕಾರ್ಮಿಕರು ಭಾಗವಹಿಸಿದ್ದರು. ಇದಕ್ಕೂ ಮೊದಲು ತಾಲೂಕು ಮೈದಾನದಿಂದ ಕಾರ್ಮಿಕರು ಮೆರವಣಿಗೆ ಹೊರಟು ಗಡಿಯಾರ ಕಂಬದ ಬಳಿಯಿಂದ ಖಾಸಗಿ ಬಸ್ಸು ನಿಲ್ದಾಣದ ಮಾರ್ಗವಾಗಿ, ಸುಣ್ಣಬೀದಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿಯಿಂದ, ದೊಡ್ಡಟ್ಟಿ ಚೌಕಿಗಾಗಿ ಹಾಗೂ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡರು.